ಬಸವಣ್ಣ, ಎಲ್ಲರೂ ನಮ್ಮವರೆಂದ ಜನದಾರ್ಶನಿಕ

ಬಸವಣ್ಣ, ಎಲ್ಲರೂ ನಮ್ಮವರೆಂದ ಜನದಾರ್ಶನಿಕ

ಸುಮಾರು ೮೫೦ ವರ್ಷಗಳ ಹಿಂದೆಯೆ ಬಸವಣ್ಣನವರು ಸ್ವಾತಂತ್ರ್ಯ, ಸಮಾನತೆ, ವಿಚಾರವಾದ ಮತ್ತು ಭ್ರಾತೃತ್ವ ಆಧಾರಿತ ಸಮಾಜಕ್ಕಾಗಿ ಹಂಬಲಿಸಿದರು. ಜೀವಿಸಿದ್ದು ೬೫ ವರ್ಷಗಳಾದರೂ (೧೧೩೧-೧೧೯೬) ಅವರ ಸಾಧನೆ ಪರ್ವತಸದೃಶ. ವಿಶ್ವಗುರು ಎಂಬ ಮನ್ನಣೆಗೆ ಪಾತ್ರರಾದ ಅವರು ಪರಿಚಯಿಸಿದ ಸಾಮಾಜಿಕ ಸುಧಾರಣೆಗಳು ಸಾರ್ವಕಾಲಿಕ. ಭಾರತೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಬಸವಣ್ಣನವರ ಬದುಕು ಮತ್ತು ಬರಹಗಳು ಒಂದು ಕ್ರಾಂತಿಕಾರಕ ಪರಿವರ್ತನೆಯನ್ನು ಪ್ರತಿನಿಧಿಸುತ್ತದೆ. ನೇರವಾಗಿ ದೈವತ್ವಕ್ಕೆ ಮುಟ್ಟಿಸುವ ಅವರ ವಚನಗಳು ಸರಳ, ಸತ್ಯ ಮತ್ತು ಪಾರದರ್ಶಕ ಶ್ರಮದ ದುಡಿಮೆಯು ಆರಾಧನೆಯ ಅತಿ ಉತ್ತುಂಗದ ರೂಪವೆಂದರು ಬಸವಣ್ಣನವರು. ಅವರು ಪ್ರತಿಪಾದಿಸಿದ ಸೇವೆಯ ಮತ್ತು ಅಹಿಂಸೆಯ ಬದುಕಿನ ಕ್ರಮ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ. ನಿಜವಾದ ಧರ್ಮವು ಕಠಿಣ ವ್ರತ, ಆಚರಣೆ, ಕಟ್ಟುಪಾಡುಗಳಲ್ಲಿ ಇಲ್ಲ, ಅದು ಸಮಾಜಪರ ಶ್ರದ್ಧೆಯಲ್ಲಿದೆ. ಪ್ರಾಮಾಣಿಕ ಕಾಯಕಕ್ಕೂ ಮೀರಿದ ಸ್ವರ್ಗವಿಲ್ಲ. ಯಾರನ್ನೂ ಕೂಡ ಹುಟ್ಟಿನಿಂದ ಅಳೆಯಬಾರದು ಮುಂತಾದ ಅವರ ಹೊಳಹುಗಳು ನಮ್ಮ ಬದುಕಿಗೆ ದಿಕ್ಸೂಚಿಗಳಾಗಿವೆ. ಇಡೀ ಜಗತ್ತಿನಲ್ಲೇ ಅನುಭವ ಮಂಟಪ ಅತಿ ಹಳೆಯ ಪ್ರಜಾತಾಂತ್ರಿಕ ವ್ಯವಸ್ಥೆ. ಭಾರತದ ಎಲ್ಲೆಡೆಗಳಿಂದ ಅಲ್ಲಿಗೆ ಬರುತ್ತಿದ್ದ ಸಂತರು, ಮೇಧಾವಿಗಳು, ದಾರ್ಶನಿಕರು ಸಂಪನ್ನ ಬದುಕಿನ ಬಗೆಗಿನ ರೂಪುರೇಶೆಗಳನ್ನು ಚರ್ಚಿಸುತ್ತಿದ್ದರು. ವಚನಗಳು ಆ ಮಾಹಾಮನೆಯ ವೇದಿಕೆಯಲ್ಲಿ ಪರಿಷ್ಕೃತಗೊಂಡು ಮತ್ತಷ್ಟು ಪ್ರಖರಗೊಂಡವು. ಲಿಂಗ, ವಯಸ್ಸು, ವರ್ಗ, ಪಂಥಗಳ ತರತಮವಿಲ್ಲದೆ ವಿಚಾರ ಮಂಡಿಸಬಹುದಿದ್ದ ಸಂಕೀರ್ಣ ಅದು. ಆ ಜನ ವಿಶ್ವವಿದ್ಯಾನಿಲಯದಲ್ಲಿ ಸಭ್ಯತೆಯ ಮುಖವಾಡಗಳು ನಿಷ್ಠುರವಾಗಿಯೆ ಟೀಕೆಗೊಳಗಾಗುತ್ತಿದ್ದವು. ಹೆಣ್ಣು, ಗಂಡು ಶಾರೀರಿಕವಾಗಿ ಭಿನ್ನವಾದರೂ ಅವರ ಆಧ್ಯಾತ್ಮಿಕ ಮಟ್ಟ ಒಂದೇ.

ಒಂದು ಸಮಾಜದ ಒಳಿತು ಮತ್ತು ಮನುಷ್ಯನ ಉದ್ಧಾರ ಕರುಣೆಯ ಅನುಷ್ಠಾನದಲ್ಲಿದೆ. ದಯೆಯೇ ಧರ್ಮದ ಮೂಲ. ಬಸವಣ್ಣನವರು ದಯೆಯಿಲ್ಲದ ಧರ್ಮ ಅದ್ಯಾವುದಯ್ಯ ಎಂದು ಸೆಡ್ಡು ಹೊಡೆದರು. ಸಹಾನುಬೂತಿ ಎಂಬ ಅಡಿಗಲ್ಲು ಸಡಿಲಗೊಳ್ಳುವುದರ ದುಷ್ಪರಿಣಾಮಗಳು ತಿಳಿದವೆ. ಅಸಮಾನತೆ ಮನುಷ್ಯಕೃತವೆ ಹೊರತು ಸ್ವಾಭಾವಿಕವಲ್ಲ. ಸ್ವತಃ ನಾವೇ ಕಲ್ಪಿಸಿಕೊಂಡ ಅನಿಷ್ಟವನ್ನು ನಾವೇ ತೊಡೆದುಹಾಕಬೇಕು, ಸಮಾನತೆಯ ಸಮಾಜ ಕಟ್ಟಿಕೊಳ್ಳಬೇಕು. ಬಸವಣ್ಣನವರ ವಿವೇಕವಾದ ಅವರ ವಚನಗಳು ಸರ್ವತ್ರ ಸಲ್ಲುತ್ತವೆ. ಅನಂತವಾದ ‘ದೈವ’ವನ್ನು ಒಂದು ಸ್ಥಳ, ಒಂದು ರೂಪ ಅಥವಾ ರಚನೆಗೆ ಸೀಮಿತಗೊಳಿಸುವುದನ್ನು ಅವರು ಒಪ್ಪಲಿಲ್ಲ. ಅವರಿಗೆ ದೇಹವೇ ದೇವಾಲಯವಾಗಿ ಕಂಡಿತು. ಕಡೆದ ಶಿಲ್ಪಗಳು ನಶಿಸುತ್ತವೆ, ಆದರೆ ಮನುಷ್ಯರ ನಂಬಿಕೆ ಅನವರತ. ಹಣ್ಣು ಮರದಿಂದ ಬೇರ್ಪಟ್ಟರೆ ಅದಕ್ಕೆ ಮರದ ಆರೈಕೆ ಹೇಗೆ ತಾನೆ ಸಾಧ್ಯ? ಭಕ್ತಿಯು ಬಸವಣ್ಣನವರ ಪಾಲಿಗೆ ಜಾತಿ ಮತ್ತು ಅದರಂಥಹ ತಡೆಗೋಡೆಗಳನ್ನು ಭೇದಿಸುವ ಅಸ್ತ್ರವಾಯಿತು. ಅಂತೆಯೆ ‘ದೈವ’ದ ಮೇಲಿನ ನಂಬಿಕೆ ಕಳೆದುಕೊಂಡರೆ ಭಕ್ತ ಅನಾಥ. ಇಲ್ಲಿ ‘ದೈವ’ ಎನ್ನುವುದು ಪ್ರಕೃತಿಯೇ ಹೌದು. ದೇಗುಲದ ಪರಿಕಲ್ಪನೆಯನ್ನು ಬಹು ಸರಳಗೊಳಿಸಿದ ಬಸವಣ್ಣರಂತಹ ಮಹಾನ್ ಸಂತ ಮತ್ತೊಬ್ಬರಿಲ್ಲ. ಅವರು ಅಹಿಂಸೆ ಮತ್ತು ಪ್ರೀತಿಯನ್ನು ಭಾರತದ ಸಂಸ್ಕೃತಿಯ ಕೇಂದ್ರವಾಗಿಸಿದರು. ದೇಶ, ಕಾಲದ ಹಂಗಿರದೆ ಶ್ರೇಷ್ಠರ ಚಿಂತನೆಗಳು ಒಂದೇ. ಗಾಂಧೀಜಿ ಬಸಾವಣ್ಣನವರನ್ನು ಭಾರತದ ಪ್ರಪ್ರಥಮ ಮುಕ್ತ ಚಿಂತಕ ಎಂದು ಶ್ಲಾಘಿಸಿದರು. ಬಸವಣ್ಣನವರು ಜಗಜ್ಯೋತಿ ಅನ್ನಿಸಿದರೆ ಗಾಂಧೀಜಿಯವರು ಮಹಾತ್ಮ ಅನ್ನಿಸಿದರು. ಈ ಇಬ್ಬರೂ ಮಹನೀಯರು ತಮ್ಮ ಸಾಮಾಜಿಕ ಮತ್ತು ರಾಜಕೀಯ ಜೀವನವನ್ನು ಆಧ್ಯಾತ್ಮಿಕಗೊಳಿಸಿದ್ದು ಮುಖ್ಯವಾಗುತ್ತದೆ. ಶರಣ ಚೆನ್ನಬಸವಣ್ಣ ಉಲ್ಲೇಖಿಸಿರುವಂತೆ ಏಕದೇವತಾ ಪರಿಕಲ್ಪನೆಯನ್ನು ಎತ್ತಿಹಿಡಿದ ಬಸವಣ್ಣನವರು ಭಕ್ತಿಯ ಕೊಯಿಲು.

ಉದಾತ್ತರನ್ನು ಪೀಳಿಗೆಗಳು ಸ್ಥಾವರವಿಲ್ಲದೆಯೂ ನೆನೆಯುತ್ತವೆ. ಸ್ಥಾವರವನ್ನು ಎತ್ತರಿಸುತ್ತ ಹೋದರೆ ಜಂಗಮ ಸೊರಗುವುದು. ಮಣ್ಣಿನ ಮೂರ್ತಿ ಮಳೆಗೆ, ಮೇಣದ ಮೂರ್ತಿ ತಾಪಕ್ಕೆ ಕರಗುವುದು. ಕಲ್ಲಿನ ವಿಗ್ರಹಕ್ಕೆ ಸವೆತ, ಹಕ್ಕಿಗಳ ಆವಾಸ ತಪ್ಪಿದ್ದಲ್ಲ. ಇನ್ನು ಲೋಹದ ಮೂರ್ತಿಗೊ ಕಳವಿನ ಆತಂಕ. ಹಾಗಾಗಿ ಮನಸ್ಸಿನಲ್ಲಿ ಕಡೆದ ಪ್ರತಿಮೆ ಅಳಿವಿಲ್ಲದೆ ಉಳಿಯುತ್ತದೆ. ಸ್ಥಾವರ ನಮ್ಮನ್ನು ಕಟ್ಟಿಹಾಕುತ್ತದೆ, ಜಂಗಮ ಹೊಸ ಹೊಸ ಗ್ರಹಿಕೆಗಳಿಗೆ ಅನುವು ಮಾಡಿಕೊಡುತ್ತದೆ. ಇಂಥಹ ಶ್ರೇಷ್ಠರು ಹೀಗೆ ಸನ್ಮಾರ್ಗದಲ್ಲಿ ಬದುಕನ್ನು ಗೌರವಿಸಿ ಬಾಳಿದರು ಎನ್ನುವ ಸಂದೇಶ ಸಾರಿ ನಮ್ಮನ್ನು ಪ್ರಭಾವಿಸುತ್ತದೆ. ಅಲ್ಲಮ ಪ್ರಭು ‘ಆಕಾಶವ ಮೀರುವ ತರುಗಿರಿಗಳುಂಟೆ? ನಿರಾಕಾರವ ಮೀರುವ ಆಕಾರವುಂಟೆ? ಗುಹೇಶ್ವರಲಿಂಗವ ಮೀರುವ ಒಡೆತನವುಂಟೆ?’ ಎಂದು ಪ್ರಶ್ನಿಸಿದರು. ಬಸವಣ್ಣನವರು ಕಾಯಕವೇ ಕೈಲಾಸ ಎನ್ನುವಾಗ ಕಾಯಕದ ದೈವತ್ವ ಮತ್ತು ಕಾಯಕದ ಘನತೆ-ಎರಡೂ ಧ್ವನಿಸುತ್ತವೆ. ರಸ್ತೆ, ನಿಲ್ದಾಣ, ಸೇತುವೆಗಳಿಗೆ ಧೀಮಂತರ ಹೆಸರುಗಳನ್ನಿಟ್ಟರೆ ಮಾತ್ರಕ್ಕೆ ಅವರ ಆದರ್ಶಗಳು ಅಮರವೆಂದಲ್ಲ. ಅವರು ಬೋಧಿಸಿದ ಒಳ್ಳೆಯ ಪಾಠ, ನಡೆದುಕೊಂಡ ಶಿಸ್ತು ಮತ್ತು ಸಂಯಮ ನಮ್ಮ ದಿನಗಳಲ್ಲಿ ಇದ್ದರಾಯಿತು. ಪ್ರಾಮಾಣಿಕ ಮತ್ತು ಋಜು ಮಾರ್ಗದಲ್ಲಿ ಸಂಪತ್ತು ಗಳಿಸಿ, ನಿಮಗೆ ಅಗತ್ಯವಾದಷ್ಟು ಬಳಸಿ ಉಳಿದುದನ್ನು ಪರರಿಗೆ ದಾಸೋಹವಾಗಿ ನೀಡುವುದು ಮಾದರಿ. ಉಣ್ಣುವನಿಗೆ ನಡೆ ನಡೆ ಎಂದು ಉಣ್ಣದ ಮೂರ್ತಿಗೆ ಅನ್ನವನ್ನು ಸಮರ್ಪಿಸುವುದು, ದಿಟ ನಾಗರವನ್ನು ಕೊಂದು ಕಲ್ಲ ನಾಗರಕ್ಕೆ ಹಾಲೆರೆಯುವುದು, ಮೂಕ ಪ್ರಾಣಿಗಳ ಬಲಿ….. ಹೀಗೆ ವಿಪರ್ಯಾಸಗಳು ಈ ವಿದ್ಯುನ್ಮಾನ ಯುಗದಲ್ಲೂ ನಮ್ಮ ಕಣ್ಮುಂದೆ ನಡೆಯುತ್ತಿವೆ. ಎಲ್ಲರೂ ನಮ್ಮವರೇ ಎಂಬ ಭಾವದಿಂದ ಸಾಮಾಜಿಕ ತಾರತಮ್ಯ ಮತ್ತು ಮೂಢನಂಬಿಕೆಗಳನ್ನು ತೊರೆದರೆ ತಾನೇ ತಾನಾಗಿ ಶಾಂತಿ, ನೆಮ್ಮದಿ ನೆಲೆಯೂರುವುದು. ಬಸವಣ್ಣನವರೆಂಬ ಮಹಾನ್ ಜನಸಂತ ನಮ್ಮ ಅಂತರಂಗ, ಬಹಿರಂಗದಲ್ಲಿ ಇರಬೇಕಿದೆ. ನಾವೆಲ್ಲರೂ ಬಸವೇಶ್ವರರ ಸದಾಶಯಗಳನ್ನು ಕಾಯಾ, ವಾಚಾ, ಮನಸಾ ಪಾಲಿಸಲು ನಿಶ್ಚಯಿಸೋಣ.

ಬಿಂಡಿಗನವಿಲೆ ಭಗವಾನ್

9886798182

Leave a Reply

Your email address will not be published. Required fields are marked *

Back To Top