ಎಲ್ಲರಿಗೂ ದಾರಿದೀಪ ಸರ್ ಎಂ.ವಿ.ಜೀವನ

ಎಲ್ಲರಿಗೂ ದಾರಿದೀಪ ಸರ್ ಎಂ.ವಿ.ಜೀವನ

ಕರುನಾಡಿನ ಹೆಮ್ಮೆಯ ಪುತ್ರ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಭಾರತದಲ್ಲಿ ಇಂಜಿನಿಯರ್‌ಗಳ ದಿನ ಎಂದು ಆಚರಿಸಲಾಗುತ್ತದೆ. ಸರ್ ಎಂ.ವಿ. ಎಂದರೇನೇ ಕರುನಾಡ ಹೆಮ್ಮೆ. ಭಾರತದ ಎಂಜಿನಿಯರಿಂಗ್ ಪಿತಾಮಹರೆಂದು ಮತ್ತು ಕರುನಾಡಿನ ಹೆಮ್ಮೆಯ ಪುತ್ರ. ಭಾರತ ದೇಶದ ಶ್ರೇಷ್ಠ ಆಸ್ತಿ. ಭಾರತ ಕಂಡ ಅಪ್ರತಿಮ ಇಂಜಿನಿಯರ್ ಇವರು. ಇವರ ಇಂಜಿನಿಯರಿಂಗ್ ಕೌಶಲ್ಯ. ದೂರದರ್ಶಿತ್ವದ ಯೋಜನೆಗಳು, ಜ್ಞಾನ ಎಲ್ಲವೂ ಅದ್ಭುತ, ನಮ್ಮ ನೆಲದ ಸಾಕ್ಷಿ ಪ್ರಜ್ಞೆ ಇವರು. ಇವರ ಜೀವನ, ಆದರ್ಶ, ಸಂದೇಶಗಳು ಇಂದಿಗೂ ಎಲ್ಲರಿಗೂ ದಾರಿದೀಪ, ಇದೇ ಕಾರಣಕ್ಕೆ ಸರ್ ಎಂ.ವಿ.ಅವರ ಜನ್ಮದಿನವನ್ನು ಇಂಜಿನಿಯರ್‌ಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಸೆಪ್ಟೆಂಬರ್ 15, 1860ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯರವರು 15 ವರ್ಷದವರಿದ್ದಾಗಲೇ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರು ತಮ್ಮ ಪ್ರಾರ್ಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢಶಿಕ್ಷಣ ಬೆಂಗಳೂರಿನಲ್ಲಿ ಮುಗಿಸಿ ಮುಂದೆ 1881 ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

ವಿಶ್ವೇಶ್ವರಯ್ಯನವರು 1884ರಲ್ಲಿ ಮುಂಬಯಿ ಸರ್ಕಾರದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಮುಂಬೈ ನಗರದಲ್ಲಿ ಲೋಕೋಪಯೋಗಿ ಇಲಾಖೆಗೆ ಇಂಜಿನಿಯರ್ ಆಗಿ ಸೇರಿದರು. ಇದಾದ ನಂತರ ಭಾರತೀಯ ನೀರಾವರಿ ಆಯೋಗದಿಂದ ಅವರಿಗೆ ಆಮಂತ್ರಣ ಬಂದಿತು. ಈ ಆಯೋಗವನ್ನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ.ವಿ.ಯವರು ಅರ್ಥರ್ ಕಾಟನ್‌ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಯೋಜನೆ ಕನಸು ರೂಪಿಸತೊಡಗಿದರು.

1908ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಅರಸರಾದ ನಾ.ಕೃ. ಒಡೆಯರವರ ಆಹ್ವಾನದ ಮೇರೆಗೆ ಸಂಸ್ಥಾನಕ್ಕೆ ದಿವಾನರಾಗಿ ಸೇವೆ ಸಲ್ಲಿಸಲು ಮುಂದಾದರು. ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಹಲವಾರು ಯೋಜನೆಗಳು ರೂಫಿಸಿ ಮೈಸೂರು ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುವಲ್ಲಿ ಅತ್ಯದ್ಭುತವಾಗಿ ಕೆಲಸ ಮಾಡಿದರು. 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು. (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು.

ಅವರ ತಾಂತ್ರಿಕ ಕೌಶಲ್ಯವು ಅಣೆಕಟ್ಟುಗಳಲ್ಲಿ ಉಪಯೋಗಿಸಲಾದ ‘ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ’ವೊಂದನ್ನು ಕಂಡು ಹಿಡಿದು ಅದಕ್ಕಾಗಿ ‘ಪೇಟೆಂಟ್’ ಪಡೆದರು. ಮೊದಲ ಬಾರಿಗೆ 1903ರಲ್ಲಿ ಈ ಫ್ಲಡ್ ಗೇಟ್‌ಗಳು ಪುಣೆಯ ‘ಖಡಕ್ವಾಸ್ಲಾ’ ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ ‘ಗ್ವಾಲಿಯರ್‌ನ ಟಿಗ್ರಾ ಅಣೆಕಟ್ಟು’ ಮತ್ತು ಕರ್ನಾಟಕದ ‘ಕೃಷ್ಣರಾಜಸಾಗರ’ ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್‌ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಟ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಏರ್ಪಡಿಸಿದಕ್ಕೆ ಜನ ಕೊಂಡಾಡಿದರು.

ವಿಶ್ವೇಶ್ವರಯ್ಯನವರ ಈ ಎಲ್ಲಾ ಸಾಧನೆಗಳು ಈ ಭೂಮಿ ಇರುವ ತನಕ ಶಾಶ್ವತವಾಗಿರುತ್ತವೆ. ಇವರ ದೂರದರ್ಶಿತ್ವದೊಂದಿಗೆ ರೂಪಿಸಲಾದ ಯೋಜನೆಗಳು ಇಂದಿಗೂ ವಿಶ್ವೇಶ್ವರಯ್ಯನವರ ಸಾಧನೆ, ಬುದ್ಧಿವಂತಿಕೆಗೆ ಸಾಕ್ಷಿಯಾಗಿ ನಿಂತಿವೆ. ಈ ದೇಶಕ್ಕೆ ಸರ್ ಎಂ.ವಿ. ಅವರು ನೀಡಿದ ಕೊಡುಗೆ ಅಪೂರ್ವ. ಕಾವೇರಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಸರ್ ಎಂ.ವಿಶ್ವೇಶ್ವರಯ್ಯನವರ ಬುದ್ಧಿವಂತಿಕೆ, ಯೋಜನಾ ನೈಪುಣ್ಯ ಮತ್ತು ಶ್ರಮದ ಫಲ. ಸರ್ ಎಂ.ವಿಶ್ವೇಶ್ವರಯ್ಯನವರ ಸಾಧನೆಗೆ 1961ರಲ್ಲಿ ಅಂದಿನ ಭಾರತ ಸರ್ಕಾರವು ಪ್ರಧಾನಿ ಜವಹರಲಾಲ್ ನೆಹರೂ ಅವರ ನಿರ್ಧಾರ ಮತ್ತು ಅಪಾರ ಆಸಕ್ತಿಯಿಂದ ‘ಭಾರತರತ್ನ’ ಬಿರುದನ್ನು ಅತ್ಯಂತ ಗೌರವವಾಗಿ ನೀಡಲಾಯಿತು.

Leave a Reply

Your email address will not be published. Required fields are marked *

Back To Top