ಗ್ರೇಟರ್ ಬೆಂಗಳೂರು : ಜಾರಿ ಇಂದು

ಗ್ರೇಟರ್ ಬೆಂಗಳೂರು : ಜಾರಿ ಇಂದು

2006 ರಿಂದ ಅಸ್ತಿತ್ವದಲ್ಲಿ ಇದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮೇ 2025 ರ 15ನೇ ತಾರೀಖಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಉನ್ನತಿಕರಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರದೇಶ ಎಂದು ಪರಿಗಣಿಸಲು ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆಯನ್ನು ಮೇ 15 ರಿಂದ ಜಾರಿಗೊಳಿಸಲು ಮೇ 09 ರಂದು ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶವು ಗ್ರೇಟರ್ ಬೆಂಗಳೂರು ಪ್ರದೇಶವಾಗಿ ಪರಿವರ್ತನೆಯಾಗಲಿದೆ. ಹಾಲಿ ಈಗ ಇರುವ 8 ವಲಯಗಳು ಮತ್ತು 625 ಚದರ ಕಿ.ಮೀ. ವಿಸ್ತೀರ್ಣವನ್ನು ವಿಸ್ತರಿಸಿ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆಯನ್ನು ಜಾರಿಗೊಳಿಸಲು ಅಂತಿಮವಾಗಿ ಸರ್ಕಾರವು ನಿರ್ಧರಿಸಿ ಆಡಳಿತ ಕಾಯಿದೆ ಅನುಷ್ಠಾನಗೊಳಿಸಿದೆ.
‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ’ಯನ್ನು ಮೇ 15 ರಂದು ಜಾರಿಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಹಿಸಿಕೊಳ್ಳುವವರೆಗೆ ಬಿಬಿಎಂಪಿ ಮುಂದುವರೆಯಲಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಯಾದ ಮೇಲೆ ಮುಖ್ಯಮಂತ್ರಿಯವರ ನೇತೃತ್ವದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) 120 ದಿನಗಳಲ್ಲಿ ರಚನೆಯಾಗಲಿದೆ. ಆಡಳಿತಾಧಿಕಾರಿ ನೇಮಕಗೊಳ್ಳಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ಗಡಿಗುರುತು ನಡೆಯಲಿದೆ. ಅನಂತರ ನಿಧಾನವಾಗಿ ಬಿಬಿಎಂಪಿ ಅಸ್ತಿತ್ವ ಕಳೆದುಕೊಳ್ಳಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಶಾಸಕರು-ಸಚಿವರು, ನಗರಾಭಿವೃದ್ಧಿ ಸಚಿವರು, ಪಾಲಿಕೆಗಳ ಮೇಯರ್‌ಗಳು, ಬಿಡಿಎ ಆಯುಕ್ತ, ಬೆಂಗಳೂರು ಜಲಮಂಡಳಿ .. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಕಂದಾಯ ಜಿಲ್ಲೆಯ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ಮಿಷನರ್, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತ ಸದಸ್ಯರಾಗಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಹಾಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಗರದ ಕೈಗಾರಿಕಾ ಪ್ರದೇಶಗಳಲ್ಲದೆ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ಕ್ಕೆ ಸೇರಿಸಿಕೊಂಡು ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆ ಇದೆ ಎಂದು ಬಲಮೂಲಗಳಿಂದ ತಿಳಿದುಬಂದಿರುತ್ತದೆ.
ಬೆಂಗಳೂರಿನ ವಿಸ್ತರಣೆ ಮತ್ತು ವ್ಯಾಪ್ತಿ ಹಿಗ್ಗಿಸಿ ಬೃಹತ್ ಕೈಗಾರಿಕೆಗಳಿಗೆ ಮತ್ತು ಅಂತರಾಷ್ಟ್ರೀಯ ಐಟಿಬಿಟಿ ಕಂಪನಿಗಳಿಗೆ ಅನುವು ಮಾಡಿಕೊಡಲು ಈ ವಿಸ್ತರಣೆಯಿಂದ ಉಪಯೋಗವಾಗಬಹುದು ಎಂಬ ಸರ್ಕಾರದ ಚಿಂತನೆಯಲ್ಲಿ ರಚನಾತ್ಮಕ ಮತ್ತು ಕಾನೂನಾತ್ಮಕ ತೊಡಕುಗಳು ಮುಂದೆ ಬರುವ ಸಾಧ್ಯತೆ ಇದ್ದು ಇವೆಲ್ಲವೂ ಬೆಂಗಳೂರನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

Back To Top