ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ತಾಯಂದಿರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ಮೂಲ ಸೌಕರ್ಯ ಮತ್ತು ಸೌಲಭ್ಯಗಳನ್ನು ಬಲಪಡಿಸಲು ರೂ.48 ಕೋಟಿಗೂ ಹೆಚ್ಚಿನ ಅನುದಾನವನ್ನು ಇನ್ಫೊಸಿಸ್ ಫೌಂಡೇಷನ್ ಒದಗಿಸಲಿದೆ.
ಇದಕ್ಕಾಗಿ, ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ. ಇದು ದುರ್ಬಲ ವರ್ಗಗಳ ಮಹಿಳೆಯರಿಗೆ, ಶಿಶುಗಳಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ಆರೋಗ್ಯ ಸೇವೆಗಳನ್ನು ಒದಗಿಸಲು ಶ್ರೀ ಸತ್ಯಸಾಯಿ ಸರಳಾ ಸ್ಮರಣಾರ್ಥ ಆಸ್ಪತ್ರೆಗೆ ನೆರವು ನೀಡಲಿದೆ.
ಕರ್ನಾಟಕದ ಗ್ರಾಮೀಣ ಪ್ರದೇಶಗಳ ತಾಯಂದಿರುವ ಮತ್ತು ಮಕ್ಕಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಗುರಿ ಹೊಂದಲಾಗಿದೆ ಎಂದು ಇನ್ಫೊಸಿಸ್ ಕಂಪನಿಯು ಷೇರುಪೇಟೆಗೆ ತಿಳಿಸಿದೆ. ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಚಟುವಟಿಕೆಗಳನ್ನು ಇನ್ಫೊಸಿಸ್ ಫೌಂಡೇಷನ್ ನಿರ್ವಹಿಸುತ್ತದೆ.
ಅನುದಾನದಲ್ಲಿನ ಒಂದು ಭಾಗವು ಶಸ್ತ್ರ ಚಿಕಿತ್ಸಾ ವೆಚ್ಚಗಳನ್ನು ಒಳಗೊಂಡಿದೆ. ವಾರ್ಷಿಕ 8 ಸಾವಿರಕ್ಕೂ ಹೆಚ್ಚು ಜನ ಇದರ ಲಾಭ ಪಡೆದುಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದೆ.



