ಕರ್ಮಫಲ

ಕರ್ಮಫಲ

81 ವರ್ಷದ ಆ ಕಪ್ಪು ಟೋಪಿದಾರಿ, ಕಪ್ಪು ಪ್ಯಾಂಟ್ ಜೊತೆ ಬಿಳಿ ಅಂಗಿ ತೊಟ್ಟಿದ್ದರು. ಜೊತೆಯಲ್ಲೊಂದು ಬಟ್ಟೆ ಚೀಲವಿತ್ತು ಕಂಕುಳಲ್ಲಿ. ಸುಮಾರು ಅರ್ಧ ಗಂಟೆ ಆಗಿತ್ತು ಮೆಡಿಕಲ್ ಶಾಪ್ ನಲ್ಲಿ ತಮ್ಮ 4 ಮಾತ್ರೆಗಳ ಲಿಸ್ಟ್ ಕೊಟ್ಟು, ಅವುಗಳ ದರ ವಿಚಾರಿಸುತ್ತಿದ್ದರು. ತಮ್ಮ ಚಿಕ್ಕ ಮೊಬೈಲ್‌ನ ಕ್ಯಾಲ್ಕೂಕ್ಲೇಲೇಟರ್‌ನಲ್ಲಿ ಪದೇಪದೇ ಲೆಕ್ಕ ಮಾಡುತಿದ್ದರು. ಕೊನೆಗೆ 17 ದಿನದ ಔಷಧಿ ಕೊಡುವಂತೆ ತಿಳಿಸಿದರು. ಅಂಗಡಿಯಾತ ಚೀಟಿಯಲ್ಲಿದ್ದಂತೆ 30 ದಿನದ ಔಷದಿ ತಂದಿದ್ದ, ಮತ್ತೆ 17 ದಿನ ಎಂದಾಗ, ಮತ್ತೆ ಮತ್ತೆ ಒಂದೆರಡು ದಿನ ಕಡಿಮೆ ಮಾಡುತ್ತಿದ್ದಾಗ ಆತ ತನ್ನ ತಾಳ್ಮೆ ಕಳೆದುಕೊಂಡ. ಪಾಪ ಅಜ್ಜನಲ್ಲಿ ಹಣ ಇಲ್ಲ ಎಂಬ ಸತ್ಯ ಆತನಿಗೆ ತಿಳಿದಿರಲಿಲ್ಲ. ಜೋರಾಗಿ ಕೂಗಿದ, ಹೋಗ್ರಿ ಇಲ್ಲಿಂದ. ದರಿದ್ರದವ್ರು ಬೆಳಿಗ್ಗೆ ಬೆಳಿಗ್ಗೆ ಎಲ್ಲೆಲ್ಲಿಂದ ಬರ್ತೀರ?. ಕೂಗಿನೊಂದಿಗೆ ವೃದ್ಧರನ್ನು ಜೋರಾಗಿ ಹೊರಗೆ ತಳ್ಳಿಬಿಟ್ಟಿದ್ದ.

ಅಲ್ಲೇ ಕೆಳಗೆ ಬಿದ್ದ ವೃದ್ಧರ ಕನ್ನಡಕ ಪುಡಿಯಾಗಿತ್ತು. ಮೆಡಿಕಲ್ ಶಾಪ್ ಗೆ ಬಂದಿದ್ದ ಎಲ್ಲಾ ಗ್ರಾಹಕರು ಒಮ್ಮೆ ತಿರುಗಿ ನೋಡಿದರು ವೃದ್ಧರನ್ನು. ಅಂಗಿಗೆ ಅಂಟಿದ್ದ ಧೂಳನ್ನು ಒರೆಸಿಕೊಳ್ಳುತ್ತಾ ಅಲ್ಲಿಂದ ಎದ್ದು ಹೊರ ನಡೆದರು. ಅವಮಾನ ದುಃಖ ಎರಡೂ ಒಟ್ಟಿಗೆ ಆಗಿದ್ದರಿಂದ ಕಣ್ಣೆರಡು ಹನಿದಿದ್ದವು ಆ ಕ್ಷಣ. ಅಷ್ಟರಲ್ಲಿ ಅಲ್ಲಿ ವಿಸ್ಮಯವೊಂದು ನಡೆದಿತ್ತು. ದೂಡಿದ್ದ ವ್ಯಕ್ತಿಗೊಂದು ಫೋನ್ ಕಾಲ್ ಬರುತ್ತದೆ. ಫೋನ್ ಎತ್ತಿ ಮಾತಾಡಿದವನ ಮುಖ ಬಿಳಿಚಿಕೊಂಡಿದೆ. ತಕ್ಷಣ ಆತ ಓಡೋಡಿ ಹೋಗಿ ವೃದ್ಧರ ಬಳಿ ಕ್ಷಮೆ ಕೇಳಿ ಮತ್ತೆ ಅವರನ್ನು ಮೆಡಿಕಲ್ ಗೆ ಶಾಪ್ ಗೆ ಕರೆದೊಯ್ಯುತ್ತಾನೆ.ಅವರ 15 ದಿನದ ಎಲ್ಲಾ ಔಷದಿಗಳನ್ನು ಕೊಡುತ್ತಾನೆ. ಈ ಬಾರಿ ವೃದ್ಧರಿಗೆ ತುಂಬಾ ಖುಷಿಯಾಗಿ ಹಣ ಕೊಡುತ್ತಾರೆ. ಹಣ ಕೊಟ್ಟು ಇನ್ನೇನು ಹೊರಗೆ ಹೋಗಬೇಕು ಅಷ್ಟರಲ್ಲಿ ಯಾರೋ ಒಬ್ಬರು ವೃದ್ಧರನ್ನು ಕರೆಯುತ್ತಾರೆ. ವೃದ್ಧರು ಹಿಂದೆ ತಿರುಗಿ ನೋಡುತ್ತಾರೆ. ಮತ್ತೆ ಅದೇ ಸೇಲ್ಸ್ ಮನ್ ಅಲ್ಲಿ ಪ್ರತ್ಯಕ್ಷನಾಗಿದ್ದ. ಕುತೂಹಲದಿಂದ “ಏನಪ್ಪಾ?” ಎಂದರು.

ಸರ್, ಇವತ್ತು ನಮ್ಮ ಮೆಡಿಕಲ್ ಶಾಪ್ ಗೆ ಬಂದ ಲಕ್ಕಿ ಕಸ್ಟಮರ್ ಒಬ್ಬರಿಗೆ ೨ ವಿಶೇಷ ಆಫರ್ ಇದೆ. ನೀವು ಇವತ್ತಿನ ನಮ್ಮ ಲಕ್ಕಿ ಕಸ್ಟಮರ್ ಎಂದಾಗ ವೃದ್ಧರಿಗೆ ತಮ್ಮ ಕಿವಿಯನ್ನೇ ನಂಬಲಾಗಲಿಲ್ಲ. ಆಸಕ್ತಿಯಿಂದ ಕೇಳಿದರು ಎಂತ ೨ ಆಫರ್ ಎಂದು. ಸೇಲ್ಸ್ ಮೆನ್ ಹೇಳಿದ ಮೊದಲನೆಯದ್ದು ಇವತ್ತು ನೀವು ಕೊಂಡ ಔಷದಿಯನ್ನು ಡಬಲ್ ಮಾಡಿ ಕೊಡಲಾಗುವುದು. ಅಂದರೆ ನೀವು ಕೊಂಡುಕೊಂಡ 15 ದಿನಕ್ಕೆ ಬದಲಾಗಿ ನಿಮಗೆ ತಿಂಗಳ ಔಷಧಿ ಕೊಡುತ್ತೇವೆ ಎಂದವನೇ ಮತ್ತೆ 15 ದಿನಗಳ ಅದೇ ಔಷಧಿಗಳನ್ನು ಕಟ್ಟಿ ಕೊಟ್ಟಿದ್ದ. ವೃದ್ಧರಿಗೆ ನಿಜಕ್ಕೂ ಖುಷಿಯಾಗಿತ್ತು. ಈ ಬಾರಿಯ ಸಂಬಳದಲ್ಲಿ ಆ ಬಡ ಹುಡುಗನ ಶಾಲೆಯ ಫೀಸ್ ಕಟ್ಟಿದ್ದು ನೆನಪಾಗಿತ್ತು ಅವರಿಗೆ. ತಿಂಗಳ ಕೊನೆಯಲ್ಲಿ ಔಷಧಿಗೆ ಹಣ ಕಮ್ಮಿಯಾಗುತ್ತದೆಂದು ತಿಳಿದಿರಲಿಲ್ಲ ಅವರು. ದೇವರಿದ್ದಾನೆ ಎಂಬುದು ಈಗ ಸ್ಪಷ್ಟವಾಗಿ ಅರಿವಾಗಿತ್ತು ಅವರಿಗೆ. ಮತ್ತೆ ಕುತೂಹಲವಿತ್ತು ಅವರಲ್ಲಿ. “ಇನ್ನೊಂದು ಆಫರ್ ಏನು?” ಎಂದು ಕೇಳಿಯೇ ಬಿಟ್ಟರು.

ಸೇಲ್ಸ್ ಮೆನ್ ಒಂದು ಚಿಕ್ಕ ಪ್ಲಾಸ್ಟಿಕ್ ಬಾಕ್ಸ್ ಅನ್ನು ಅವರ ಎದುರಿಗಿಟ್ಟ “ಇಲ್ಲಿಂದ ಒಂದು ಚೀಟಿ ತೆಗೆಯಿರಿ. ಅಲ್ಲಿ ಏನಾದರೊಂದು ಗಿಫ್ಟ್ ಇರಬಹುದು ಸರ್” ಎಂದ. ಕುತೂಹಲ ಇನ್ನೂ ಹೆಚ್ಚಾಗಿತ್ತು, ಒಂದು ಚೀಟಿ ಎತ್ತಿದರು ಬಾಕ್ಸ್ ನಿಂದ. ಸರ್ ನೀವೇ ಓದಿ ಹೇಳಿ ಎಂದ ಹುಡುಗ. ಬಿದ್ದು ಪುಡಿಯಾಗಿದ್ದ ಗಾಜಿನ ಒಂದು ತುಂಡನ್ನು ಮೆಲ್ಲನೆ ಎತ್ತಿದವರೇ ಮೆಲ್ಲಗೆ ಓದಿದರು. ಆಶ್ಚರ್ಯ ಕನ್ನಡಕ ಎಂದಿತ್ತು ಅಲ್ಲಿ. “ಸರ್ ಕಂಗ್ರಾಜುಲೇಷನ್ ಪಕ್ಕದ ಶಾಪ್ಗೆ ಹೋಗಿ ನಿಮಗೆ ಆಗುವ ಒಂದು ಕನ್ನಡಕ ಖರೀದಿಸಿ, ಹಣ ನಾವೇ ಕೊಡುತ್ತೇವೆ ಇದೇ ನಿಮ್ಮ 2 ನೆಯ ಅದೃಷ್ಟ ಬಹುಮಾನ” ಎಂದ ಸೇಲ್ಸ್ ಮೆನ್. ಖುಷಿಯಿಂದ ಈ ಬಾರಿ ಅಜ್ಜನ ಕಣ್ಣುಗಳು ಮಂಜಾಗಿದ್ದವು. ಪಕ್ಕದ ಕನ್ನಡಕದ ಅಂಗಡಿಗೆ ಓಡಿದರು. 15 ನಿಮಿಷದಲ್ಲಿ ಅಜ್ಜ ಹೊಸ ಕನ್ನಡಕದೊಂದಿಗೆ ಬಂದರು. ಕನ್ನಡಕದ ಹಣ ಪಾವತಿಸಲಾಯಿತು. ಅಜ್ಜನಿಗೆ ಸಂತೋಷವಾಗಿತ್ತು. ಮೆಡಿಕಲ್ ನವನಿಗೆ ಕೈಮುಗಿದು ಹೊರಟರು. ಅಲ್ಲೇ ಮೆಟ್ಟಿಲು ಹತ್ತುವಾಗ ಏನೋ ನೆನಪಾಯಿತು ತಟ್ಟನೆ ಹಿಂದೆ ತಿರುಗಿದರು. ಅವರಿಗೂ ಸಂದೇಹವಿತ್ತು ಇಷ್ಟೆಲ್ಲವನ್ನೂ ನನಗೆ ಕೊಟ್ಟಿರುವ ಆ ಪುಣ್ಯಾತ್ಮನನ್ನು ನೋಡಬೇಕಿತ್ತು ಅವರಿಗೆ. ವಾಪಾಸ್ ಆ ಸೇಲ್ಸ್ ಮೆನ್ ಬಳಿ ಬಂದರು. ನನಗೆ ಇಷ್ಟೆಲ್ಲ ಕೊಟ್ಟಿರುವ ಆ ಪುಣ್ಯಾತ್ಮ ಯಾರು ನನಗೊಮ್ಮೆ ನೋಡಬೇಕಿತ್ತು ಅವರನ್ನು ಕೇಳಿಯೇ ಬಿಟ್ಟರು. ಅಷ್ಟರಲ್ಲಿ ಫೋನ್ ಮತ್ತೆ ರಿಂಗ್ ಆಗಿತ್ತು. ಸೇಲ್ಸ್ ಮೆನ್ ಹಲೋ ಎಂದ. ಆ ವೃದ್ಧರನ್ನು ಒಳಗೆ ಮ್ಯಾನೇಜಿಂಗ್ ಚೇಂಬರ್ ಒಳಗೆ ಕಳಿಸುವಂತೆ ತಿಳಿಸಲಾಯಿತು. ಮೆಲ್ಲನೆ ಬಾಗಿಲು ದೂಡಿ ಒಳಗೆ ಹೋದರು. ಕಥೆಗೆ ಅಲ್ಲೊಂದು ಆಶ್ಚರ್ಯಕರ ತಿರುವಿತ್ತು.

ಅಲ್ಲಿ ದೊಡ್ಡ ಛಿಛಿ ಟಿವಿ ಯಲ್ಲಿ ಸೂಟ್ ಧಾರಿ ವ್ಯಕ್ತಿಯೊಬ್ಬ ಎಲ್ಲವನ್ನೂ ವೀಕ್ಷಿಸುತಿದ್ದ. ಸೀದಾ ಬಂದು ವೃದ್ಧರ ಕಾಲು ಹಿಡಿದು ಆಶೀರ್ವಾದ ಪಡೆದ. ಹೊಸ ಕನ್ನಡಕ ಸರಿ ಮಾಡಿ ನೋಡಿದರು ವೃದ್ಧರು ಪರಿಚಯ ಸಿಕ್ಕಿರಲಿಲ್ಲ ಅವರಿಗೆ. ಆತನೇ ಹತ್ತಿರ ಬಂದ. ಸರ್ ನಾನು ನಿಮ್ಮ ಒಬ್ಬ ವಿದ್ಯಾರ್ಥಿ. ಅಂದು ನಮ್ಮ ತಂದೆ ನನ್ನನ್ನು 5 ನೆಯ ತರಗತಿಯಿಂದ ಬಿಡಿಸಿ ಕೆಲಸಕ್ಕೆ ಹಾಕಿದಾಗ, ನೀವೇ ಮನೆಗೆ ಬಂದು ನನ್ನ ಫೀಸ್ ಕಟ್ಟಿ ಶಾಲೆಗೆ ಸೇರಿಸಿದಿರಿ. 6,7,8,9,10 ಕ್ಕೂ ನೀವೇ ಹಣ ಕೊಟ್ಟಿದ್ದು. ರಲ್ಲಿ ಅಂಕ ಕಡಿಮೆ ಬoದಾಗ ನಾನು ತೀರಾ ಬೇಸರಗೊಂಡಿದ್ದಾಗ ನೀವೇ ಬಳಿಗೆ 10 ಬಂದು ಸಮಾಧಾನ ಮಾಡಿದ್ದಿರಿ. ಅಂಕ ಕೇವಲ ಪರೀಕ್ಷೆಗಷ್ಟೇ. ಜೀವನದ ಅಂಕ ನಾವೇ ಸಂಪಾದಿಸಬೇಕು. ಕಠಿಣ ಪರಿಶ್ರಮವಷ್ಟೇ ಜೀವನದ ಅಂಕಗಳಿಸುವ ವಿಧಾನ ಎಂದು ಅಮೂಲ್ಯ ಸತ್ಯವೊಂದನ್ನು ಮನದಟ್ಟಾಗುವಂತೆ ವಿವರಿಸಿದ್ದಿರಿ. ಹಾಗೇ ಗುಟ್ಟಾಗಿ ಸಹಾಯ ಮಾಡಲು ಹೇಳಿಕೊಟ್ಟಿದ್ದು ನೀವೇ ಸರ್ ಎಂದಾಗ, ಮೇಷ್ಟ್ರಿಗೆ ಈಗ ಗುರುತು ಸಿಕ್ಕಿತ್ತು. ಸಿದ್ದು ಅಲ್ವಾ ನೀನು ಎಂದಾಗ ಹೌದು ಸರ್ ಅದೇ ಸಿದ್ದು ಸರ್. ೨ ಮೆಡಿಕಲ್ ಶಾಪ್ ಹಾಕಿದ್ದೇನೆ. ಇದು ನನ್ನ ಕಠಿಣ ದುಡಿಮೆಯ ಫಲ ಸರ್. ಎಂದಾಗ ಮೆಷ್ಟ್ರಿಗಾದ ಖುಷಿ ಅಷ್ಟಿಷ್ಟಲ್ಲ.

ಅದೆಲ್ಲಾ ಸರಿ ಯಾಕೆ ನನಗೆ ಹಣ ಮತ್ತೆ ಕನ್ನಡಕ ಕೊಡಿಸಿದ್ದೆ? ಎನ್ನುವಾಗ ಈ ಬಾರಿ ಅವರ ಸ್ವರ ಸ್ವಲ್ಪ ದಪ್ಪವಾಗಿತ್ತು. ಎಂದೂ ಬೇರೆಯವರ ಹಣವನ್ನು ಅಪೇಕ್ಷಿಸದ ಸ್ವಾಭಿಮಾನಿ ಮೇಷ್ಟ್ರಿಗೆ ಹೀಗೆ ವಿದ್ಯಾರ್ಥಿಯೊಬ್ಬ ಹಣ ನೀಡುವುದು ಬೇಕಿರಲಿಲ್ಲ. “ಇಲ್ಲ ಸರ್ ಅದು ನಾನು ಕೊಟ್ಟಿದ್ದಲ್ಲ ನೀವು ಗಳಿಸಿದ್ದು, ಅದೃಷ್ಟ ಕೋಪನ್ ಅಲ್ಲಿ ನಿಮಗೆ ಸಿಕ್ಕಿದ್ದು ಅದು. ನಿಮ್ಮ ಪಾಲಿನದ್ದು” ಎನ್ನುವಾಗ ಮೇಸ್ಟ್ರಿಗೆ ಸ್ವಲ್ಪ ಸಮಾಧಾನ ವಾಗಿತ್ತು. ತಮ್ಮ ವಿದ್ಯಾರ್ಥಿಗೆ ಧನ್ಯವಾದಗಳನ್ನು ಹೇಳಿ ಅಲ್ಲಿಂದ ಹೊರಟರು. ಹೊರಗೆ ಅದೇ ಸೇಲ್ಸ್ ಮೆನ್ ಮತ್ತೆ ಆತ್ಮೀಯವಾಗಿ ನಕ್ಕ. ಈಗಷ್ಟೇ ಡ್ರಾ ಮಾಡಿದ್ದ ಚೀಟಿಗಳನ್ನು ಕಸದ ಬುಟ್ಟಿಗೆ ಎಸೆದಿದ್ದ. ಮೇಷ್ಟ್ರಿಗೆ ಬೈ ಬೈ ಹೇಳಿದ್ದ. ಟಾಟಾ ಮಾಡಿದ ಅಧ್ಯಾಪಕರು ರಸ್ತೆ ತನಕ ಹೋಗಿದ್ದರು ತಕ್ಷಣ ಏನೋ ನೆನಪದವರೇ ಮತ್ತೆ ಕಸದ ಬುಟ್ಟಿ ತನಕ ಬಂದವರೇ ಬುಟ್ಟಿ ಒಳಗೆ ಇದ್ದ ಚೀಟಿ ಅಷ್ಟೂ ಗಳನ್ನು ಹೆಕ್ಕಿ ಕೊಂಡರು ಒಂದೊಂದಾಗಿ ತೆರೆದು ನೋಡಿದರು ಮೊದಲನೆಯದರಲ್ಲಿ ಇತ್ತು ಕನ್ನಡಕ, ಎರಡನೆಯದ್ದರಲ್ಲೂ ಕನ್ನಡಕ, 2,4,5..ಎಲ್ಲದರಲ್ಲೂ ….ಕನ್ನಡಕ ಒಮ್ಮೆ ಆವೇಶದಿಂದ ಮೇಲೆದ್ದರು. ಆ ಸೇಲ್ಸ್ ಮೆನ್ ತಲೆ ಕೆಳಗೆ ಹಾಕಿ ಕಳ್ಳನಂತೆ ಅವರನ್ನೇ ನೋಡುತಿದ್ದ. ತನ್ನಂತೆ ಹೆಸರು ಹೇಳದೆ ಸಹಾಯ ಮಾಡುವ ತನ್ನ ಶಿಷ್ಯನ ನೆನೆದು ನಕ್ಕು ಮುಂದೆ ನಡೆದರು ಮೇಷ್ಟ್ರು. ನಿಜ ನಾವು ಮಾಡುವ ನಿಸ್ವಾರ್ಥ ಸೇವೆಯ ಪ್ರತಿಫಲ ಎಂದಾದರೊಂದು ದಿನ ನಮಗೆ ಸಿಕ್ಕಿಯೇ ಸಿಗುತ್ತದೆ. ಅವರಿವರ ಕೊಂಕು ಮಾತುಗಳಿಗೆ ಚಿಂತೆ ಬೇಡ, ಅವ ಗುರುತಿಸಲಿಲ್ಲ ಇವ ಗುರುತಿಸಲಿಲ್ಲ, ಎಂದು ಬೇಸರ ಬೇಡ ಸೇವೆ ಮಾಡುತ್ತಿರಿ. ಯಾರೂ ನೋಡದಿದ್ದರೇನಂತೆ ಮೇಲೊಬ್ಬ ನೋಡುತ್ತಿದ್ದಾನೆ. ಅಷ್ಟು ಸಾಕಲ್ಲವೇ ನಾಲ್ಕು ದಿನದ ಈ ನಶ್ವರ ಬದುಕಿಗೆ.

Leave a Reply

Your email address will not be published. Required fields are marked *

Back To Top