ಯುಪಿಐ ಮೂಲಕ ವರ್ಷವೊಂದರಲ್ಲಿ ರೂ.40 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿದ ಬೇಕರಿ, ಹೋಟೆಲ್, ಬೀಡಾ ಅಂಗಡಿ, ಟೀ-ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ಈಚೆಗೆ ನೋಟಿಸ್ ನೀಡಿದ್ದು, ರಾಜ್ಯದಲ್ಲಿ ಯುಪಿಐ ಮೂಲಕ ಹಣ ಪಡೆಯುತ್ತಿರುವ ಸುಮಾರು 65,000 ವರ್ತಕರ ಮಾಹಿತಿಯನ್ನು ಯುಪಿಐ ಪ್ಲಾಟ್ಫಾರ್ಮ್ಗಳಿಂದ ವಾಣಿಜ್ಯತೆರಿಗೆ ಇಲಾಖೆ ಪಡೆದುಕೊಂಡಿತ್ತು. ಎಲ್ಲರೂ ಜಿಎಸ್ಟಿಗೆ ನೋಂದಾಯಿಸಿ ಎಂದು ಸೂಚಿಸಿತ್ತು. ಆದರೆ ಮುಕ್ಕಾಲು ಭಾಗ ಸಣ್ಣ ವರ್ತಕರು ಬೇಕರಿ, ಪಾನ್ ಶಾಪ್, ಟೀ ಸ್ಟಾಲ್ನವರು ಈ ಮೂರು ವರ್ಷವು ತೆರಿಗೆ ಕಟ್ಟುವಲ್ಲಿ ನಿರ್ಲಕ್ಷಿಸಿದ್ದರು.
‘ಆರ್ಥಿಕ ವರ್ಷವೊಂದರಲ್ಲಿ ಯುಪಿಐ ಮೂಲಕ ರೂ.40 ಲಕ್ಷಕ್ಕಿಂತ ಹೆಚ್ಚು ಹಣ ಪಡೆದ ಸುಮಾರು 15,000 ಮಂದಿಯ ವಿವರ ಇಲಾಖೆಗೆ ದೊರೆತಿದ್ದು ಜುಲೈ 10 ರವರೆಗೆ 5,864 ಮಂದಿಗೆ ತೆರಿಗೆ ಕಟ್ಟಲು ನೋಟಿಸ್ ಜಾರಿ ಮಾಡಲಾಗಿತ್ತು. ಹಲವರಿಗೆ ಜಿಎಸ್ಟಿ ಕಟ್ಟಿ ಎಂದು ಸೂಚಿಸಿದ್ದರೆ, ಕೆಲವರಿಗೆ ವಿವರಣೆ ನೀಡಿ ಎಂದು ವಾಣಿಜ್ಯ ತೆರಿಗೆ ಇಲಾಖೆಯು ಸೂಚಿಸಲಾಗಿತ್ತು. ಯುಪಿಐ ಕ್ಯೂಆರ್ ಕೋಡ್ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ 40 ಲಕ್ಷಕ್ಕೂ ಮೀರಿ ವಹಿವಾಟಿನ ಹಣ ಪಡೆದ ಬೇಕರಿ, ಪಾನ್ ಶಾಪ್ ಮತ್ತು ಸಣ್ಣಂಗಡಿಯವರು ಇದರಿಂದ ಕಂಗೆಟ್ಟು ಯುಪಿಐ ಕ್ಯೂ ಆರ್ ಕೋಡ್ ಹರಿದು ಪ್ರತಿಭಟಿಸಿ, ನಗದು ವ್ಯವಹಾರದ ಬದಲಿ ವ್ಯವಸ್ಥೆಗೆ ಮುಂದಾಗಿದ್ದರು. ಇದನ್ನು ಸಾರ್ವಜನಿಕರಿಗೆ ಮತ್ತು ಗ್ರಾಹಕರಿಗೆ ತಿಳಿಸುತ್ತಾ ಜುಲೈ 17 ರಿಂದ ಸಂಪೂರ್ಣವಾಗಿ ಕ್ಯೂಆರ್ ಕೋಡ್ ಆಧಾರಿತ ಯುಪಿಐ ವಹಿವಾಟುಗಳನ್ನು ತೃಜಿಸುವುದಾಗಿ ಮತ್ತು ಇನ್ನು ಮುಂದೆ ಕೇವಲ ನಗದು ವ್ಯವಹಾರದಲ್ಲೆ ಹಣಪಾವತಿಸುವಂತೆ ಗ್ರಾಹಕರಲ್ಲಿ ವಿನಂತಿಸಿಕೊಂಡಿದ್ದರು.
ಸಣ್ಣ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ಇಲಾಖೆಯು ನೀಡಿದ ಈ ತೆರಿಗೆ ನೋಟಿಸಿನಿಂದ ಕಂಗೆಟ್ಟು ಸಣ್ಣ ವ್ಯಾಪಾರಿಗಳು ಜುಲೈ 23 ರಂದು ಪ್ರತಿಭಟನಾ ರ್ಯಾಲಿ ಮತ್ತು ಜುಲೈ 25 ರಂದು ಬೆಂಗಳೂರು ಬಂದ್ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದರು.
ಆದರೆ ಈ ಪ್ರತಿಭಟನೆ ಮತ್ತು ಬೆಂಗಳೂರು ಬಂದ್ ಕಾವು ಸಾರ್ವಜನಿಕವಾಗಿ ಬಹಿರಂಗವಾಗುತ್ತಿದ್ದಂತೆ ಸಣ್ಣ ಉದ್ಯಮಿದಾರರು ಮತ್ತು ವರ್ತಕರೊಂದಿಗೆ ಮುಖ್ಯಮಂತ್ರಿಯವರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿ ಜುಲೈ 23 ರಂದು ಸಭೆ ನಡೆಸಿ ತಮ್ಮ ಸರ್ಕಾರದ ವಾಣಿಜ್ಯ ಇಲಾಖೆಯು ನೀಡಿರುವ ತೆರಿಗೆ ಪಾವತಿ ನೋಟಿಸ್ಗಳನ್ನು ಹಿಂಪಡೆಯುವುದಾಗಿ ಮಾಧ್ಯಮದಲ್ಲಿ ಘೋಷಿಸಿದರು. ಮತ್ತು ಇನ್ನು ಮುಂದೆ ಕಳೆದ ಮೂರು ವರ್ಷದ ಹಿಂಬಾಕಿಯನ್ನು ಸರ್ಕಾರವು ಕೇಳುವುದಿಲ್ಲ. ಎಲ್ಲಾ ಸಣ್ಣ ಅಂಗಡಿಗಳು, ಬೇಕರಿ, ಟೀ ಸ್ಟಾಲ್, ಪಾನ್ ಶಾಪ್ ಇನ್ನಿತರ ವಾಣಿಜ್ಯ ವರ್ತಕರು ಜಿಎಸ್ಟಿ ಕಡ್ಡಾಯವಾಗಿ ನೋಂದಾವಣಿ ಮಾಡಿಸಿಕೊಳ್ಳಲು ಸೂಚಿಸಿದರು.



