ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ – ಅಕ್ಟೋಬರ್‌ನಿಂದ ಡಿಸೆಂಬರ್ ಒಳಗೆ ಚುನಾವಣೆ ನಿರೀಕ್ಷೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಸರ್ಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ತೀರ್ಮಾನ ತೆಗೆದುಕೊಂಡಿರುವ ರಾಜ್ಯ ಸರಕಾರ ಇದೀಗ ಅಂತಿಮವಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಮಹಾನಗರ ಪಾಲಿಕೆಗಳನ್ನು ರಚಿಸಲು ಬಹುತೇಕ ಅಂತಿಮ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು 19.07.2025 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿ ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳಿಂದ ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳನ್ನು ನೀಡಲು ಆಹ್ವಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾವ ಕುರಿತು ಚರ್ಚೆ ನಡೆದಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024ರ ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ 5 ಮಹಾನಗರ ಪಾಲಿಕೆಗಳು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿವೆ ಎಂದು ಮೂಲಗಳು ತಿಳಿಸಿವೆ. 5 ಮಹಾನಗರ ಪಾಲಿಕೆಗಳು ರಚನೆಯಾಗಲಿವೆ. ಮೂಲಗಳ ಪ್ರಕಾರ, ಬರುವ ಅಕ್ಟೋಬರ್‌ನಿಂದ ಡಿಸೆಂಬರ್ ಒಳಗೆ ಹೊಸ 5 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಅದಕ್ಕೂ ಮೊದಲು 5 ಪಾಲಿಕೆಗಳಿಗೆ ಗಡಿಗಳ ಗುರುತು ಮಾಡಲಾಗಿದ್ದು ವಾರ್ಡ್ಗಳ ಸಂಖ್ಯೆ, ಮತದಾರರ ವಿಗಂಡಣೆ, ವಾರ್ಡ್ಗಳ ಮೀಸಲಾತಿ ನಿಗದಿ ಮತ್ತಿತರ ಕಾರ್ಯಗಳು ಪೂರ್ಣಗೊಳ್ಳಬೇಕಿದೆ.
ಸರ್ಕಾರದ ಮೂಲಗಳ ಪ್ರಕಾರ, ಪ್ರತಿ ಮಹಾನಗರ ಪಾಲಿಕೆಯು 100 ರಿಂದ ವಾರ್ಡ್ಗಳನ್ನು ಒಳಗೊಂಡು ಮೇಯರ್, ಉಪ ಮೇಯರ್ ಹೊಂದಲಿದೆ. ಇವರ ಅವಧಿ 30 ತಿಂಗಳು ನಿಗದಿಗೊಳ್ಳುವ ಸಾಧ್ಯತೆ ಇದೆ.
ಗ್ರೇಟರ್ ಬೆಂಗಳೂರು ನಡೆದು ಬಂದ ಹಾದಿ
- 22 ಸೆಪ್ಟೆಂಬರ್ 2014 : ಬಿಬಿಎಂಪಿ ವಿಭಜನೆಗೆ ವರದಿ ಸಲ್ಲಿಸಲು ನಿವೃತ್ತ ಮುಖ್ಯ. ಕಾರ್ಯದರ್ಶಿ ಬಿ.ಎಸ್. ಪಾಟೀಲ್ ನೇತೃತ್ವದ ತಜ್ಞರ ಸಮಿತಿ ರಚನೆ.
- ೧೨ ಜೂನ್ 2023 ಬಿಬಿಎಂಪಿ ವಿಭಜನೆಗೆ ವರದಿ ಸಲ್ಲಿಸಲು ರಚಿಸಲಾಗಿದ್ದ ತಜ್ಞರ ಸಮಿತಿಯ ಪುನರ್ ರಚನೆ.
- ೧೮ ಜುಲೈ 2023 ತಜ್ಞರ ಸಮಿತಿ ಮತ್ತೊಮ್ಮೆ ಪುನರ್ ರಚಿಸಿ ಬಿಬಿಎಂಪಿ ಸುಧಾರಣಾ ಸಮಿತಿಯ (ಬ್ರಾಂಡ್ ಬೆಂಗಳೂರು ಸಮಿತಿ) ಎಂದು ನಾಮಕರಣ.
- ೮ ಜುಲೈ 2024 : ಬಿಬಿಎಂಪಿ ಸುಧಾರಣಾ ಸಮಿತಿಯಿಂದ ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024’ರ ಕರಡು ಸರ್ಕಾರಕ್ಕೆ ಸಲ್ಲಿಕೆ.
- ೨೨ ಜುಲೈ 2024 : ಮೂರು ಹಂತದಲ್ಲಿ ಹೊಸ ಆಡಳಿತ ವ್ಯವಸ್ಥೆ ಕಲ್ಪಿಸುವ ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024’ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ.
- ೨೩ ಜುಲೈ 2024 : ವಿಧಾನಸಭೆಯಲ್ಲಿ ಮಸೂದೆ ಮಂಡನೆ.
- ೨೫ ಜುಲೈ 2024 : ವಿರೋಧ ಪಕ್ಷಗಳ ಆಗ್ರಹದಂತೆ ಮಸೂದೆ ಪರಿಶೀಲನೆಗೆ ಜಂಟಿ ಸದನ ಸಮಿತಿ ರಚನೆಗೆ ಒಪ್ಪಿಗೆ.
- ೨೨ ಆಗಸ್ಟ್ 2024 : ಶಾಸಕ ರಿಹ್ವಾನ್ ಅರ್ಷದ್ ನೇತೃತ್ವದಲ್ಲಿ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿ ರಚನೆ.
- ೨೧ ಫೆಬ್ರವರಿ 2025; ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿಯಿಂದ ಸ್ಪೀಕರ್ ಅವರಿಗೆ ಪರಿಶೀಲನಾ ವರದಿ ಸಲ್ಲಿಕೆ.
- ೫ ಮಾರ್ಚ್ 2025 : ಪರಿಶೀಲನಾ ಸಮಿತಿ ಶಿಫಾರಸ್ಸಿನಂತೆ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024 ವಿಧಾನಸಭೆಯಲ್ಲಿ ಮಂಡನೆ.
- 10 ಮಾರ್ಚ್ 2025 : ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ.
- 12 ಮಾರ್ಚ್ 2025 ಕೆಲವು ತಿದ್ದುಪಡಿಗಳೊಂದಿಗೆ ವಿಧಾನ ಪರಿಷತ್‌ನಲ್ಲಿ ಮಸೂದೆಗೆ ಒಪ್ಪಿಗೆ.
- 13 ಮಾರ್ಚ್ 2025 : ತಿದ್ದುಪಡಿಗಳೊಂದಿಗೆ ವಿಧಾನಸಭೆಯಲ್ಲಿ ಮತ್ತೊಮ್ಮೆ ಅಂಗೀಕಾರ.
- 17 ಮಾರ್ಚ್ 2025 : ಮಸೂದೆಗೆ ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ರವಾನೆ.
- 25 ಮಾರ್ಚ್ 2025 : ಕೆಲವು ಸ್ಪಷ್ಟನೆ ಕೋರಿ ರಾಜ್ಯಪಾಲರಿಂದ ಮಸೂದೆ ವಾಪಸ್.
- 24 ಏಪ್ರಿಲ್ 2025 : ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ 2024ಗೆ ರಾಜ್ಯಪಾಲರ ಅಂಕಿತ.
- 17 ಜುಲೈ 2025 : ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಪಾಲಿಕೆಗೆ ರಚನೆಗೆ ಸಚಿವ ಸಂಪುಟ ಸಭೆ ಅಸ್ತು.
- 19 ಜುಲೈ 2025 : ಗ್ರೇಟರ್ ಬೆಂಗಳೂರು ಐದು ಪಾಲಿಕೆಯಾಗಿ ವಿಂಗಡಿಸಿ ಸರ್ಕಾರದ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿದೆ.
ಬೆಂಗಳೂರು ಉತ್ತರ ಮಹಾನಗರ ಪಾಲಿಕೆ (ಹಳೆ ಬಿಬಿಎಂಪಿ ವ್ಯಾಪ್ತಿಯೊಳಗೆ)
ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ (ಹಳೆ ಬಿಬಿಎಂಪಿ ವ್ಯಾಪ್ತಿಯೊಳಗೆ)
ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ (ಹಳೆ ಬಿಬಿಎಂಪಿ ವ್ಯಾಪ್ತಿಯೊಳಗೆ)
ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ (ಹಳೆ ಬಿಬಿಎಂಪಿ ವ್ಯಾಪ್ತಿಯೊಳಗೆ)
ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆ (ಹಳೆ ಬಿಬಿಎಂಪಿ ವ್ಯಾಪ್ತಿಯೊಳಗೆ)


