ಅಯೋಧ್ಯೆಯಲ್ಲಿ ಶ್ರೀರಾಮನ ದರ್ಬಾರ್

ಅಯೋಧ್ಯೆಯಲ್ಲಿ ಶ್ರೀರಾಮನ ದರ್ಬಾರ್

ಉತ್ತರ ಪ್ರದೇಶದ ಅಯೋಧ್ಯೆ (Ayodhya)ಯಲ್ಲಿರುವ ರಾಮ ಮಂದಿರದಲ್ಲಿ ಶ್ರೀ ರಾಮನ ಎರಡನೇ ಪ್ರಾಣ ಪ್ರತಿಷ್ಠಾ ಸಮಾರಂಭವು ಮತ್ತು ರಾಮ ದರ್ಬಾರ್ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ತುಂಬಾ ಶ್ರದ್ಧಾಭಕ್ತಿಯಿಂದ ಶಾಸ್ತ್ರೋಕ್ತವಾಗಿ ಜೂನ್ ೩ ರಂದು ನಡೆಯಿತು. ಈ ಪವಿತ್ರ ಸಮಾರಂಭದಲ್ಲಿ ಶ್ರೀರಾಮ ಜನ್ಮಭೂಮಿ ಸಂಕೀರ್ಣದೊಳಗೆ ರಾಜಾ ರಾಮ ಮತ್ತು ಇತರ ದೇವತೆಗಳ ಪ್ರತಿಷ್ಠಾಪನೆ ನಡೆದಿದ್ದು, ಇದೇ ಸಂದರ್ಭದಲ್ಲಿ ರಾಮ ಜನ್ಮಭೂಮಿ ದೇವಸ್ಥಾನದ ಮೊದಲ ಮಹಡಿಯಲ್ಲಿರುವ ರಾಮ ದರ್ಬಾರ್‌ನ ಎಂಟು ದೇವಾಲಯಗಳು, ಪಾರ್ಕೋಟಾ, ಶಿವಲಿಂಗ, ಗಣಪತಿ, ಹನುಮಾನ್, ಸೂರ್ಯ, ಭಗವತಿ ಮತ್ತು ಅನ್ನಪೂರ್ಣ ಆರು ದೇವಾಲಯಗಳು ಮತ್ತು ಶೇಷಾವತಾರ ದೇವಾಲಯದಲ್ಲಿರುವ ದೇವತೆಗಳ ವಿಗ್ರಹಗಳ ಪ್ರಾಣ ಪ್ರತಿಷ್ಠಾನ ನಡೆಯಿತು. ಅಂದು ರಾಮ ದೇವಾಲಯವನ್ನು ಸುಂದರವಾದ ದೀಪಗಳಿಂದ ಅಲಂಕರಿಸಲಾಗಿ ನೆರೆದ ಸಹಸ್ರಾರು ಭಕ್ತರ ಕಣ್ಮನ ಭಕ್ತಿ ಪಾರವಶ್ಯಕ್ಕೆ ಕೊನೆಯೇ ಇಲ್ಲದಂತಾಯಿತು.
ಗರ್ಭಗುಡಿಯ ಮೇಲೆ ಇರುವ ಬಂಗಾರದ ಶಿಖರವು ಪಾವಿತ್ರö್ಯತೆ, ಪ್ರಗತಿ ಮತ್ತು ಭಕ್ತಿಯ ಸಂಕೇತವಾಗಿದೆ. ಹಲವಾರು ಕಿ.ಮೀ.ಗಳ ದೂರಕ್ಕೂ ಗೋಚರಿಸುತ್ತಿರುವ ಈ ನಯನ ಮನೋಹರ ಗುಮ್ಮಟವು ಭಕ್ತರ ಕಣ್ಮನ ತಣಿಸುತ್ತಿದೆ ಮತ್ತು ಬರುತ್ತಿರುವ ಭಕ್ತರ ಭಕ್ತಿ-ಭಾವವನ್ನು ಇಮ್ಮಡಿಗೊಳಿಸುತ್ತಿದೆ.
ದಶಮಿಯ ಪವಿತ್ರ ದಿನವಾದ ಅಂದು ಅಯೋಧ್ಯೆಯ (Ayodhya) ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀ ರಾಮ ದರ್ಬಾರ್‌ನ (Rama Darbar) ಪ್ರಾಣ ಪ್ರತಿಷ್ಠಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿ ಮೂರು ದಿನಗಳ ಧಾರ್ಮಿಕ (Spiritual) ಆಚರಣೆಗಳ ಅಂತಿಮ ದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತದನಂತರ ಲಕ್ಷ ಲಕ್ಷ ಭಕ್ತರು ತಂಡೋಪತಂಡವಾಗಿ ಅಯೋಧ್ಯ ರಾಮಮಂದಿರ ಮತ್ತು ನೂತನವಾಗಿ ಉದ್ಘಾಟನೆಗೊಂಡ ದೇವಸ್ಥಾನ ಪ್ರಾಂಗಣದ ಇತರೆ ಎಲ್ಲಾ ಗುಡಿಗಳನ್ನು ಸಂದರ್ಶಿಸಿ ಭಕ್ತಿಪುನೀತರಾಗುತ್ತಿದ್ದಾರೆ.
ಈ ಕಾರ್ಯಕ್ರಮವು ಎಲ್ಲ ಜನರ ಸಹಕಾರ ಶ್ರೀ ರಾಮ ನ್ಯಾಸ ಭಕ್ತಿ ಮಂಡಳಿ ಮತ್ತು ಉತ್ತರ ಪ್ರದೇಶ ಸರ್ಕಾರದ ಸಹಕಾರ ಸಹಯೋಗದಿಂದ ತುಂಬಾ ವಿಜೃಂಭಣೆಯಿಂದ ಅತ್ಯಂತ ಯಶಸ್ವಿಯಾಗಿ ನ ಭೂತೆ ನ ಭವಿಷ್ಯತೆ ಎಂಬ ರೀತಿಯಲ್ಲಿ ನಡೆಯಿತು.

Leave a Reply

Your email address will not be published. Required fields are marked *

Back To Top