ಬೆಂಗಳೂರು ಸುರಂಗ ಮಾರ್ಗ – ಟ್ರಾಫಿಕ್ ಜಾಮ್‌ಗೆ ಮುಕ್ತಿಯೆಂದು?

ಬೆಂಗಳೂರು ಸುರಂಗ ಮಾರ್ಗ – ಟ್ರಾಫಿಕ್ ಜಾಮ್‌ಗೆ ಮುಕ್ತಿಯೆಂದು?

1991 ರಿಂದ ಬೆಂಗಳೂರು ಮಹಾನಗರವು 330ಕಿ.ಮೀ. ವಿಸ್ತೃತ ರಸ್ತೆ ಜಾಲವು ವಿಸ್ತೀರ್ಣವಾಗುತ್ತ ಅತಿ ಹೆಚ್ಚು ವಾಹನಗಳು ಮತ್ತು ಕೈಗಾರಿಕೆಗಳು ಅಭಿವೃದ್ಧಿ ಹೊಂದುವ ಸಮಯದಿಂದ 2006-07ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದ ತಕ್ಷಣದಿಂದಲೆ 625 ಚ.ಕಿ.ಮೀ. ವ್ಯಾಪ್ತಿಯ 11,000 ಕಿ.ಮೀ. ರಸ್ತೆಗಳನ್ನು ಹೊಂದಿ 4 ಒಳಭಾಗದ ವರ್ತುಲ ರಸ್ತೆಗಳು ಮತ್ತು ೨ ಹೊರಭಾಗದ ಉದ್ದದ ವರ್ತುಲ ರಸ್ತೆಗಳು ಈ 30 ವರ್ಷಗಳಲ್ಲಿ ನಿರ್ಮಾಣವಾಗಿ ಅದಕ್ಕೆ ಹೊಂದಿಕೊಂಡಂತೆ 35 ಕಿ.ಮೀ. ಉದ್ದ ನೈಸ್ ರಸ್ತೆಯಲ್ಲೂ ಪ್ರತಿ ದಿನಕ್ಕೆ 6.5 ಲಕ್ಷ ವಾಹನಗಳ ಚಲನವಲನ ಓಡಾಟದಿಂದ ಇಡೀ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಎಂಬ ಪೆಡಂಭೂತ ವಕ್ಕರಿಸಿ ಕೂತಿದೆ. ಇದಕ್ಕೆ ಸ್ಥಳೀಯ ವಾಹನಗಳಲ್ಲದೆ ಸುಮಾರು 6.5 ಲಕ್ಷ ಸರಕು ಸಾಗಾಣೆ ಲಾರಿ, ಗೂಡ್ಸ್ ವಾಹನಗಳು ಮತ್ತು ಪ್ರಯಾಣಿಕರ ವಾಹನಗಳನ್ನು ಸೇರಿ ಜನನಿಬಿಡ ನಗರ ಪ್ರದೇಶದಲ್ಲಿ ವಾಹನದಟ್ಟಣೆಯಿಂದ ಸುಮಾರು ೨ ಘಂಟೆಗಳಿಗೂ ಹೆಚ್ಚು ಕಾಲ ಮಂದಗತಿಯಲ್ಲಿ ಚಲಿಸಿ ಸಿಗ್ನಲ್ ಜಂಕ್ಷನ್‌ನಲ್ಲಿ ವಿಪರೀತವಾದ ವಾಹನ ದಟ್ಟಣೆಯಿಂದ ಬೆಂಗಳೂರು ನಾಗರಿಕರು ಹೈರಾಣವಾಗಿ ಇನ್ನಿಲ್ಲದ ಆರೋಗ್ಯ ಸಮಸ್ಯೆ ಮತ್ತು ಸಮಯಪೋಲು ಕಾರ್ಯವಿಳಂಬದಿಂದಾಗಿ ತಲ್ಲಣಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಪ್ರತಿ ಪ್ರಗತಿಪರಿಶೀಲನ ಸಮಯದಲ್ಲಿ ಈ ಟ್ರಾಫಿಕ್ ಜಾಮ್ ಮತ್ತು ವಾಹನ ದಟ್ಟಣೆಯನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಿದಾಗ ಕೇವಲ ವರ್ತುಲ ರಸ್ತೆ ಮತ್ತು ಮೆಟ್ರೊ ರೈಲ್ ಸಂಚಾರದಿಂದ ಕಡಿಮೆಯಾಗುವ ಲಕ್ಷಣಗಳು ಕಂಡುಬರದ ಪ್ರಯುಕ್ತ, ಬೆಂಗಳೂರು ಅಭಿವೃದ್ಧಿ ಪ್ರಗತಿಪಥಕ್ಕೆ ವಿಶ್ವದಾದ್ಯಂತ ಅತಿ ಹೆಚ್ಚು ಜನನಿಬಿಡ ಮತ್ತು ವಾಹನದಟ್ಟ ನಗರಗಳಲ್ಲಿ ಸ್ಥಾಪಿತಗೊಂಡ ಸುರಂಗಮಾರ್ಗ ವಾಹನ ಸಂಚಾರ ವ್ಯವಸ್ಥೆಯನ್ನು ಅಳವಡಿಸಿ ದಟ್ಟಣೆ ಕಡಿಮೆ ಮಾಡಲು ನೀಲನಕ್ಷೆಯನ್ನು ಸಿದ್ಧಪಡಿಸಲು ಈ ಎರಡು ವರ್ಷಗಳಲ್ಲಿ ಸರಣಿ ಸಭೆಗಳನ್ನು ನಡೆಸುತ್ತಾ ಬಂದಿದ್ದು, ನಮ್ಮ ಪತ್ರಿಕೆಯು ಈ ಸುರಂಗಮಾರ್ಗದ ವಿವರಗಳನ್ನು ಪಡೆದು ಅವಲೋಕಿಸಿದಾಗ ಮೇಲ್ಮೆೈ ನೋಟಕ್ಕೆ ನೀಲಿ ನಕ್ಷೆಯ ತಾಂತ್ರಿಕ ಕಾರ್ಯ ಸಾಧ್ಯತೆಗಳನ್ನು ವಿಶ್ಲೇಷಿಸಿದಾಗ ಈ ಕೆಳಕಂಡ ಅಂಶಗಳು ಕಂಡುಬಂದಿರುತ್ತದೆ.
ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ವರೆಗೆ ಸುರಂಗ ರಸ್ತೆ ಉತ್ತರ-ದಕ್ಷಿಣ ಕಾರಿಡಾರ್‌ನ್ನು 16.69 ಕಿ.ಮೀ. ವಿಸ್ತೀರ್ಣದಲ್ಲಿ ಸುರಂಗ ರೂ.17,780 ಕೋಟಿ ಅಂದಾಜು ವೆಚ್ಚದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲು ತಾಂತ್ರಿಕ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಹಾಗೆಯೇ ಕೆ.ಆರ್.ಪುರದಿಂದ ನಾಯಂಡಹಳ್ಳಿವರೆಗಿನ ಸುರಂಗ ರಸ್ತೆ ಪೂರ್ವ-ಪಶ್ಚಿಮ ಕಾರಿಡಾರ್‌ನ್ನು 28.181 ಕಿ.ಮೀ. ಸುರಂಗ ರೂ.25,022 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ತಾಂತ್ರಿಕ ಸಿದ್ಧತೆಗಳನ್ನು ತಯಾರಿಸಲಾಗಿದೆ.
ವಿಶ್ವದ ಅತಿ ಹೆಚ್ಚು ವಾಹನ ದಟ್ಟಣೆ ಮಹಾನಗರಗಳ ರಸ್ತೆ ಸಂಚಾರಿ ವ್ಯವಸ್ಥೆಗಳನ್ನು ಪರಿಶೀಲಿಸಿದಾಗ ಅಮೇರಿಕಾದ ಹಲವು ನಗರಗಳಲ್ಲಿ, ಜಪಾನ್ ಟೋಕಿಯೋ ನಗರದ ಯಾಮಾಟೆ ಸುರಂಗ ಮಾರ್ಗ, ಎಂ.30 ಸುರಂಗ ಜಾಲ, ಆಸ್ಟ್ರೇಲಿಯಾದ ಸಿಡ್ನಿ ಸುರಂಗ ಮಾರ್ಗ ಮತ್ತು ನಮ್ಮ ದೇಶದ ದೆಹಲಿ ಸುರಂಗ ಮಾರ್ಗಗಳ ವ್ಯಾಪ್ತಿ ಮತ್ತು ದಟ್ಟಣೆ ಕಡಿಮೆ ಮಾಡುವಲ್ಲಿ ತೆಗೆದುಕೊಂಡ ಕ್ರಮಗಳನ್ನು ವಿಶ್ಲೇಷಿಸಿ ಅಂದಾಜು ಪಟ್ಟಿಗಳನ್ನು ತಯಾರಿಸಲಾಗಿದೆ ಎಂದು, ಇವೆಲ್ಲವೂ ತಾಂತ್ರಿಕ ಪರಿಣಿತಿಯ ಮತ್ತು ಕಾರ್ಯಸಾಧು ಸಾಧ್ಯಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಪರಿಣಿತರು ಮತ್ತು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಇಂಜಿನಿಯರ್‌ಗಳು ಅಂದಾಜು ಪಟ್ಟಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿರುತ್ತದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಹೆಬ್ಬಾಳದಿಂದ ರೇಷ್ಮೆ ಮಂಡಳಿಯವರೆಗಿನ ‘ಸುರಂಗ ರಸ್ತೆ’ ಯೋಜನೆಗೆ ೨೦೨೪ರ ಸೆಪ್ಟೆಂಬರ್, ಡಿಸೆಂಬರ್ ಹಾಗೂ ೨೦೨೫ರ ಫೆಬ್ರವರಿವರೆಗೆ ತಾಂತ್ರಿಕ ವಿಶ್ಲೇಷಣೆ ಅಂತಿಮ ಘಟ್ಟ ತಲುಪಿದೆ ಮತ್ತು ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸುದ್ಧಿ ಮಾಧ್ಯಮಕ್ಕೆ ತಿಳಿಸಿರುತ್ತಾರೆ.
ಸುಮಾರು ರೂ.18 ಸಾವಿರ ಕೋಟಿ ವೆಚ್ಚದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ನಡುವಿನ ಸುರಂಗ ರಸ್ತೆ ಬೂಟ್ (ಅಭಿವೃದ್ಧಿ, ಕಾರ್ಯಾಚರಣೆ, ವರ್ಗಾವಣೆ) ಆಧಾರದಲ್ಲಿ ನಿರ್ಮಾಣವನ್ನು ಕೈಗೆತ್ತಿಕೊಳ್ಳಲು ಮತ್ತು 2030ರ ಒಳಗೆ ಸುರಂಗ ರಸ್ತೆ ಕಾಮಗಾರಿ ಪೂರ್ಣಗೊಳಿಸಲು, ಸರ್ಕಾರವು ಅನುಮೋದನೆ ನೀಡಲು ಮತ್ತು ನಿರ್ಧಾರ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ತಿಳಿಸಿರುತ್ತಾರೆ.
ಈ ಸುರಂಗಮಾರ್ಗ ರಸ್ತೆ ನಿರ್ಮಾಣದಿಂದ ವಾಹನ ದಟ್ಟಣೆ, ಇಂಧನ ಉಳಿತಾಯ ಮತ್ತು ವಿಶೇಷವಾಗಿ ಐಟಿಬಿಟಿ ವಲಯಕ್ಕೆ ಉತ್ತೇಜನ ನೀಡಲು ಹಾಗೂ ಸಾರ್ವಜನಿಕರ ಸಮಯ ಉಳಿಸಿ ನಗರದ ಅಭಿವೃದ್ಧಿಗೆ ಹೆಚ್ಚುವರಿ ಸವಲತ್ತುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದೆಂಬ ಯೋಚನೆಯೊಂದಿಗೆ ಈ ಯೋಜನೆ ಕಾರ್ಯಗತಗೊಳಿಸಲು ಸರ್ಕಾರವು ಕಟಿಬದ್ಧವಾಗಿದೆಯೆಂದು ಅನಿಸುತ್ತಿದ್ದು ಈ ಯೋಜನೆಯು ಸಂಪೂರ್ಣ ತಾಂತ್ರಿಕ ವ್ಯವಸ್ಥೆ ಮತ್ತು ಟೆಂಡರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಕಾಮಗಾರಿ ಪೂರ್ಣಗೊಳಿಸುವಲ್ಲಿ ಎಷ್ಟು ಸಮಯ ತೆಗೆದುಕೊಳ್ಳಬಹುದೆಂದು ಮುಂದಿನ ದಿನಗಳಲ್ಲಿ ಬೆಂಗಳೂರು ನಗರ ಸಾರ್ವಜನಿಕರು, ವಾಹನ ಸಂಚಾರಕರು ಮತ್ತು ಕೈಗಾರಿಕೋದ್ಯಮಿಗಳು ಕಾದು ನೋಡಬಹುದು.

Leave a Reply

Your email address will not be published. Required fields are marked *

Back To Top