ವಿಜಯನಗರದ ಸಾಳುವ ವಂಶದ ಒಂದು ಶಾಖೆಯ ಅರಸರು ಗೇರುಸೊಪ್ಪೆಯನ್ನು ಆಳುತ್ತಿದ್ದರೆ ಮತ್ತೊಂದು ವಂಶದವರು ಹಾಡುವಳ್ಳಿಯನ್ನು ಆಳುತ್ತಿದ್ದರು. ಗೇರುಸೊಪ್ಪೆಯ ಅರಸ ಇಮ್ಮಡಿ ದೇವರಾಯ (1515-50) ಪೋರ್ಚುಗೀಸರ ಮೇಲೆ ಯುದ್ಧ ಮಾಡಿದ. ಮಡಗೋವೆಯ ಬಳಿ 1542ರಲ್ಲಿ ನಡೆದ ಭೀಕರ ಯುದ್ಧದಲ್ಲಿ ಆತ ಸೋಲನ್ನಪ್ಪಿದ ಬಳಿಕ ಪೋರ್ಚುಗೀಸರು ಆತನ ರಾಜಧಾನಿ ಭಟ್ಕಳವನ್ನು ಸುಟ್ಟು ಹಾಕಿದರು. ಆತನ ಪತ್ನಿ ಚೆನ್ನಾದೇವಯ ತಂಗಿಯೇ ಚೆನ್ನಭೈರಾದೇವಿ. ಪೋರ್ಚುಗೀಸರ ಜೊತೆಗಿನ ಒಪ್ಪಂದದಂತೆ ಕಪ್ಪವನ್ನು ಕೊಡಲಿಲ್ಲವೆಂದು, ಕಾರ್ಟಜ್ ಪಡೆಯದ ಮಹಮದ್ದೀಯರ ಹಡಗುಗಳಿಗೆ ಭಟ್ಕಳ ಬಂದರಿನಲ್ಲಿ ಆಶ್ರಯ ಕೊಟ್ಟಿರುವಳೆಂದು ಆರೋಪಿಸಿ, ಪೋರ್ಚುಗೀಸ್ ಕಪ್ತಾನ ಆಲ್ಫನ್ಸೋ ಡಿಸೋಜಾ ಭಟ್ಕಳವನ್ನು ಮುತ್ತಿ ರಾಣಿಯನ್ನು ಸೋಲಿಸಿ ಭಟ್ಕಳವನ್ನು ಸುಟ್ಟು ಹಾಕಿದ. ಅಕ್ಕನ ನಂತರ ತಂಗಿ ಚೆನ್ನಭೈರಾದೇವಿಗೆ ಹಾಡುವಳ್ಳಿಯ ಜೊತೆಗೆ ಗೇರುಸೊಪ್ಪೆಯ ಅಧಿಕಾರವೂ ದೊರಕಿತು. 1559 ಮತ್ತು 1570ರಲ್ಲಿ ಪೋರ್ಚುಗೀಸರ ವಿರುದ್ಧ ನಡೆದ ಹೋರಾಟ ನಡೆಸಿ ಎರಡೂ ಯುದ್ಧಗಳನ್ನು ಗೆದ್ದಳು. 1671ರ ಸಂಯುಕ್ತ ಸೇನೆಯ ನಾಯಕತ್ವವೂ ಸಹ ಇವಳೇ ವಹಿಸಿದ್ದಳು. ಇದರಲ್ಲಿ ಗುಜರಾತಿನ ಸುಲ್ತಾನರು, ಬೀದರ್ನ ಸುಲ್ತಾನರು, ಬಿಜಾಪುರದ ಆದಿಲ್ ಶಾಹಿಗಳು ಹಾಗು ಕೇರಳದ ಜಾಮೋರಿನ್ ದೊರೆಗಳನ್ನು ಒಳಗೊಂಡಂತೆ ಹಲವು ಜನ ರಾಜರು ಈ ಸೇನೆಯಲ್ಲಿದ್ದರು.
ಚೆನ್ನಭೈರಾದೇವಿಯು ಸಾಳುವ ವಂಶಕ್ಕೆ ಸೇರಿದ ಒಬ್ಬ ರಾಣಿ. 16ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಈ ರಾಣಿಯು 54 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಳು. ಪ್ರಸ್ತುತ ಭಟ್ಕಳ ತಾಲೂಕಿನಲ್ಲಿರುವ ಹಾಡವಳ್ಳಿ (ಸಂಗೀತಪುರ) ಮತ್ತು ಗೇರುಸೊಪ್ಪ ಪ್ರಾಂತ್ಯವನ್ನು ಆಳುತ್ತಿದ್ದ ಈಕೆಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ. ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ ಕಾಳುಮೆಣಸನ್ನು ಯೂರೋಪಿಗೆ ರಫ್ತು ಮಾಡುತ್ತಿದ್ದ ಈಕೆಗೆ ಕರಿಮೆಣಸಿನ/ಕಾಳುಮೆಣಸಿನ ರಾಣಿ ಎಂದೂ ಕರೆಯಲಾಗಿದೆ. ಪೋರ್ಚುಗೀಸರು, ಕೆಳದಿ ಅರಸರು ಮತ್ತು ಬಿಜಾಪುರದ ಸುಲ್ತಾನರ ನಡುವಿನ ಯುದ್ಧಗಳನ್ನು ತನ್ನ ಜಾಣ್ಮೆಯಿಂದ ನಿರ್ವಹಿಸಿದ ಈಕೆ 1552-1606 ರ ನಡುವಿನ ಐವತ್ನಾಲ್ಕು ವರ್ಷಗಳ ಕಾಲ ರಾಜ್ಯಭಾರ ನಡೆಸಿದಳು. ಗೇರುಸೊಪ್ಪೆಯಲ್ಲಿ ಅಲ್ಲಿನ ನಾಡವರು ಮತ್ತು ಖಾರ್ವಿಗಳು “ಅವ್ವರಸಿ” ಎಂದು ಪೂಜಿಸುವ ರಾಣಿ ಚೆನ್ನಭೈರಾದೇವಿಯ ದೇವಸ್ಥಾನವಿದೆ. ಈಕೆಗೆ ಪೋರ್ಚುಗೀಸರು “ರೈನಾ ದೆ ಪಿಮೆಂಟಾ” ಎಂಬ ಹೆಸರು ಕೊಟ್ಟಿದ್ದರು.
1552 ರಿಂದ 1606 ರವರೆಗೆ ಒಟ್ಟು 54 ವರ್ಷಗಳ ಕಾಲ ಹೈವ, ತುಳುವ, ಕೊಂಕಣ ಪ್ರದೇಶಗಳನ್ನು ಹಾಡುವಳ್ಳಿ ಗೇರುಸೊಪ್ಪೆ ಅವಳಿ ಪಟ್ಟಣಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಆಳಿದ ವೀರ ರಾಣಿ ಚೆನ್ನಭೈರಾದೇವಿ ಸರ್ವಧರ್ಮ ಸಮನ್ವಯ ಸಾಧಿಸಿದ ಜಿನಮಾನಿನಿ. ಎಲ್ಲ ಸಮಾಜದ ಎಲ್ಲ ಪ್ರಜೆಗಳಿಗೂ ಕೃಷಿ, ವ್ಯಾಪಾರ ಮತ್ತು ವ್ಯವಹಾರವನ್ನು ಕಲಿಸಿ ತನ್ನ ಸಾಮ್ರಾಜ್ಯದ ಆದಾಯವನ್ನು ಹೆಚ್ಚಿಸಿದ್ದಳು.1606ರಲ್ಲಿ ಕೆಳದಿ ಅರಸರ ತಂತ್ರಗಾರಿಕೆಯಿಂದ ಬಂಧನಕ್ಕೆ ಒಳಗಾಗಿ ಸಾಮ್ರಾಜ್ಯವನ್ನು ಕಳೆದುಕೊಂಡು ಹಳೆ ಇಕ್ಕೇರಿಯಲ್ಲಿ ಬಂಧನದಲ್ಲಿದ್ದು, ಜಿನಪದ್ಧತಿಗೆ ಅನುಗುಣವಾಗಿ ನಿರಾಹಾರ ವ್ರತಧಾರಿಯಾಗಿ ಸಲ್ಲೇಖದ ಮೂಲಕ ಇಹಲೋಕ ತ್ಯಜಿಸಿದ್ದಳು.
ಅಮೆರಿಕೆಯ ಟೆಕ್ಸಾಸ್ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಚಾರ್ಯೆ ಡಾ. ಹನ್ನಾ ಚಾಪೆಲ್ ವೋಜೋಸ್ಕಿ ತನ್ನ ಪ್ರಬಂಧವೊಂದರಲ್ಲಿ ಹೀಗೆ ಬರೆದಿದ್ದಾರೆ.
“Her story—what little we know of it today—is important for a variety of reasons, not least because it counters the masculinist narratives of conquest and dominance penned by European chroniclers from the beginning of the colonial period. Chennabhairadevi was almost an exact contemporary of Queen Elizabeth I of England, and in many ways she was her counterpart. Chennabhairadevi succeeded in holding onto her kingdom for over 50 years, outwitting multiple adversaries through shrewd alliances, and in leveraging a great deal of political, cultural, and economic power.”
“ರಾಣಿ ಚೆನ್ನಭೈರಾದೇವಿಯ ಧೈರ್ಯ, ಸ್ಥೈರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ, ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು”
ಇದು, ಗೌರವಾನ್ವಿತ ರಾಷ್ಟ್ರಪತಿ ಸನ್ಮಾನ್ಯ ಡಾ. ದ್ರೌಪದಿ ಮುರ್ಮುರವರು ದಿನಾಂಕ 24-7-2025ರಂದು ರಾಷ್ಟ್ರಪತಿ ಭವನದಲ್ಲಿ ರಾಣಿಯ ನೆನಪಿನ ಅಂಚೆಚೀಟಿ ಬಿಡುಗಡೆಯ ಸಂದರ್ಭದಲ್ಲಿ ನುಡಿದ ಮಾತು



