ನೇಗಿಲ ಯೋಗಿಗಳ ಹೋರಾಟಕ್ಕೆ ಮಣಿದ ಸರ್ಕಾರ : ಭೂಸ್ವಾಧೀನ ಕೈ ಬಿಟ್ಟ ರಾಜ್ಯ ಸರ್ಕಾರ
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಸ್ಥಾಪಿಸಲು ಉದ್ದೇಶಿರುವ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ಗಾಗಿ ಜಮೀನು ನೀಡಲು ರೈತರು ಭಾರೀ ಪ್ರತಿಭಟನೆ ನಡೆಸಿ ಅಮರಣಾಂತ ಉಪವಾಸದೊಂದಿಗೆ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಡಲು ನಿರ್ಧರಿಸಿದೆ. ಈ ಮೂಲಕ ಕಳೆದ ಮೂರುವರೆ ವರ್ಷಗಳಿಂದ ನಡೆದಿರುವ ರೈತರ ಹೋರಾಟ ತಾರ್ಕಿಕ ಅಂತ್ಯಕಂಡಿದ್ದು, ಅನ್ನದಾತರ ಆಂದೋಲನಕ್ಕೆ ದೊಡ್ಡ ಗೆಲುವು ಲಭಿಸಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜುಲೈ ೧೫ರಂದು ನಡೆದ ರೈತರ ಜೊತೆಗಿನ ಸಭೆಯಲ್ಲಿ ಭೂಸ್ವಾಧೀನ ಕೈ ಬಿಡಲು ಸರ್ಕಾರ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿರುತ್ತಾರೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ತಕ್ಷಣದಿಂದ ಅನ್ವಯವಾಗುವಂತೆ ಭೂಸ್ವಾಧೀನ ಅಧಿಸೂಚನೆ ರದ್ದು ಮಾಡಲಾಗಿದೆ. ಈ ಮೂಲಕ ಕಳೆದ ಮೂರುವರೆ ವರ್ಷಗಳಿಂದ ನಡೆದಿರುವ ರೈತರ ಹೋರಾಟ ತಾರ್ಕಿಕ ಅಂತ್ಯ ಕಂಡಿದ್ದು, ಅನ್ನದಾತರ ಆಂದೋಲನಕ್ಕೆ ದೊಡ್ಡ ಗೆಲುವು ಲಭಿಸಿದೆ.
ಕೆಐಎಡಿಬಿಯಿಂದ ೧೩ ಗ್ರಾಮಗಳಲ್ಲಿ ೧,೭೭೭ ಎಕರೆ ಭೂ ಸ್ವಾಧೀನ ಹೊರಡಿಸಲಾಗಿದ್ದ ಅಧಿಸೂಚನೆ ವಿರೋಧಿಸಿ ರೈತರು ಸುಮಾರು ೧,೨೦೦ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಈ ಹೋರಾಟ ಆರಂಭವಾಗಿತ್ತು. ಅಂದು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ರೈತರ ಪರ ಮಾತನಾಡಿ ಬೆಂಬಲಿಸಿ ಯೋಜನೆಯನ್ನು ರದ್ದುಗೊಳಿಸಬೇಕೆಂದು ವಿಧಾನಸಭೆಯಲ್ಲಿ ಒತ್ತಾಯಿಸಿದ್ದರು. ಅಂದು ಹೋರಾಟ ಬೆಂಬಲಿಸಿದ್ದ ಸಿದ್ದರಾಮಯ್ಯ ಇಂದು ಮುಖ್ಯಮಂತ್ರಿ ಆಗಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದರು.
ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ನಮ್ಮ ಸರ್ಕಾರ ಸಂಪೂರ್ಣವಾಗಿ ಕೈ ಬಿಟ್ಟಿದೆ. ಯಾವುದೇ ಕಾರಣಕ್ಕಾದರೂ ಭೂಸ್ವಾಧೀನಕೈ ಬಿಟ್ಟರೆ ಈ ಕೈಗಾರಿಕೆ ಬೇರೆ ಕಡೆ ಹೋಗುವ ಸಾಧ್ಯತೆ ಇದ್ದು, ಇದರಿಂದ ಕರ್ನಾಟಕ ಜನತೆಗೆ ಉದ್ಯೋಗ ನಷ್ಟವೂ ಸಂಭವಿಸಲಿದೆ. ಆದರೂ ಸರ್ಕಾರ ರೈತರ ಬೇಡಿಕೆಗಳಿಗೆ ಮನ್ನಣೆ ನೀಡಿದ್ದು, ರೈತಪರ ನಿರ್ಣಯ ಕೈಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಮೂಲಕ ಅನ್ನದಾತ ಮೊದಲು ಎಂಬ ಸಂದೇಶವನ್ನು ರವಾನಿಸಿದೆ ಎಂದು ಸಭೆಯ ಬಳಿಕ ಸಿದ್ದರಾಮಯ್ಯ ತಿಳಿಸಿದರು.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದೇವೆ. ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು. ಅಂತಹ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರವನ್ನು ನೀಡಲಿದೆ. ಆದರೆ ಆ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬಯಸುವ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬಹುದಾಗಿದ್ದು ಅಂತಹ ರೈತರ ಜಮೀನನ್ನು ಅಧಿಸೂಚನೆಯಿಂದ ಕೈಬಿಟ್ಟು ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗ ಬೇಕಿದ್ದರೆ ಅಭಿವೃದ್ದಿ ಕಾರ್ಯ ನಡೆಯಬೇಕಾಗಿದೆ. ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಜಮೀನು ಸ್ವಾಧೀನಪಡಿಸಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ನೀಡಬೇಕಾಗುತ್ತದೆ. ೧೭೭೭ ಎಕ್ರೆ ಜಮೀನು ದೇವನಹಳ್ಳಿ ತಾಲೂಕಿನಲ್ಲಿ ಸ್ವಾಧೀನಪಡಿಸಿಕೊಂಡು, ಅಲ್ಲಿ ಏರೋಸ್ಪೇಸ್ ಪ್ರಾರಂಭಿಸುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ರೈತರು ಪ್ರತಿಭಟಿಸಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿ ಕೈಗಾರಿಕೆಗಳಿಗೆ ಬೇರೆಡೆ ಜಮೀನು ನೀಡಲಾಗುವುದು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿರುತ್ತದೆ. ವಾಸ್ತವವಾಗಿ, ಇದು ೨೦೨೦ರಲ್ಲಿ ಪ್ರಾರಂಭವಾದ ಒಂದು ಪ್ರತಿಭಟನೆಯಾಗಿದ್ದು ಸ್ಥಳೀಯ ರೈತರ ಗುಂಪಿನಿಂದ ಪ್ರಾರಂಭವಾಯಿತು. ಮುಂದೆ ಚಳುವಳಿ ರೂಪ ತಾಳಿ ಬೃಹದಾಕಾರವಾಗಿ ಬೆಳೆದು ಪ್ರಕಾಶ್ರೈ ಮತ್ತು ಇನ್ನಿತರ ಸಾಮಾಜಿಕ ವ್ಯಕ್ತಿಗಳು ಮತ್ತು ಸಂಘಟನೆಗಳ ಜೊತೆಗೂಡಿ ಪ್ರತಿಭಟನೆಯು ಮುಂದುವರೆಯಿತು. ದೇವನಹಳ್ಳಿ ತಾಲೂಕಿನ ೧೩ ಗ್ರಾಮಗಳಲ್ಲಿ ಭೂಮಿ ಸ್ವಾಧೀನತೆ ವ್ಯಾಪಿಸಿದ್ದು ಈ ಹಿಂದೆ ಭೂಸ್ವಾಧೀನ ಪ್ರಕ್ರಿಯೆಗಳು ಕಡಿಮೆ ಮಾರುಕಟ್ಟೆ ದರಗಳನ್ನು ಹೊಂದಿದ್ದವು. ರೈತರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಕಾರಣದಿಂದಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸಿದರು. ಆದ್ದರಿಂದ ಚಳುವಳಿಯು ಉಗ್ರರೂಪ ತಾಳಿ ವಿವಿಧ ಪ್ರಮುಖ ಸಂಸ್ಥೆಗಳು, ರೈತರು, ವಕೀಲರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವು ಜನರನ್ನು ಒಳಗೊಂಡು ಮುಖ್ಯಮಂತ್ರಿಗಳ ಸಭೆಯೊಂದಿಗೆ ಮತ್ತು ಭೂಸ್ವಾಧೀನ ರದ್ದಿನೊಂದಿಗೆ ಈ ಚಳುವಳಿ ತಾರ್ಕಿಕ ಅಂತ್ಯಕ್ಕೆ ಬಂದು ತಲುಪಿತು.
ಮುಖ್ಯಮಂತ್ರಿಯವರು ನಾಲ್ಕು ತಿಂಗಳ ಅವಧಿಯಲ್ಲಿ ಹಲವಾರು ಸುತ್ತು ಅಧಿಕಾರಿಗಳೊಂದಿಗೆ ಮತ್ತು ರೈತರೊಂದಿಗೆ ಸಭೆಸರಣಿ ನಡೆಸಿದರು, ಮತ್ತು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಸ್ಥಾಪಿಸಲು ಉದ್ದೇಶಿರುವ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ಗಾಗಿ ಜಮೀನು ನೀಡಲು ರೈತರು ಭಾರೀ ಪ್ರತಿಭಟನೆ ನಡೆಸಿ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭೂ ಸ್ವಾಧೀನ ಕೈ ಬಿಡಲು ನಿರ್ಧರಿಸಿತು. ಭೂಸ್ವಾಧೀನದ ಅಧಿಸೂಚನೆಯನ್ನು ಕೈಬಿಟ್ಟಿರುವ ಸರ್ಕಾರದ ನಿರ್ಧಾರಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಹೋರಾಟಕ್ಕೆ ಯಶಸ್ಸು ದೊರೆತಾಗ ಸಂಭ್ರಮಿಸುವುದು ಸಹಜ. ಆದರೆ, ರೈತರು ಸಾಗಬೇಕಾಗಿರುವ ದಾರಿ ಹಾಗೂ ಎದುರಿಸಬೇಕಾದ ಸವಾಲು ದೀರ್ಘವಾದುದು, ಭೂಸ್ವಾಧೀನದ ಅಧಿಸೂಚನೆ ಕೈಬಿಟ್ಟಿದ್ದರೂ, ಸ್ವಯಂ ಪ್ರೇರಣೆಯಿಂದ ಜಮೀನು ನೀಡುವ ರೈತರ ಭೂಮಿಯನ್ನು ಪಡೆಯುವುದಾಗಿ ಹಾಗೂ ಆ ಜಮೀನಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚಿನ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಈ ನಿರ್ಧಾರ, ಭೂಮಿಯನ್ನು ಮಾರುವ ಇಲ್ಲವೇ ಮಾರದಿರುವ ಸ್ವಾತಂತ್ರö್ಯವನ್ನು ರೈತರಿಗೆ ಉಳಿಸಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ, ಭೂಮಿಯನ್ನು ಮಾರುವ ಅವಕಾಶ ಮುಕ್ತವಾಗಿರುವುದು ರೈತರಲ್ಲಿ ಗೊಂದಲ ಮೂಡಿಸಬಹುದು ಹಾಗು ಕೃಷಿಯ ಬಗ್ಗೆ ಭರವಸೆಗಳನ್ನು ಕಳೆದುಕೊಂಡವರು ತಮ್ಮ ಭೂಮಿ ಬಿಟ್ಟುಕೊಡಲು ಒತ್ತಾಸೆಯಾಗಿ ಪರಿಣಮಿಸಬಹುದು, ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಅನುಕೂಲ ಕಲ್ಪಿಸಬೇಕಾದ ಸರ್ಕಾರವೇ, ಮಾರಾಟದ ಸಾಧ್ಯತೆಗಳನ್ನು ರೈತರ ಮುಂದಿಡುವ ವಿರೋಧಾಭಾಸ ಸುಲಭ ವ್ಯಾಖ್ಯಾನಕ್ಕೆ ನಿಲುಕುವಂತಹದ್ದಲ್ಲ. ಆರಂಭದಲ್ಲಿ ಕೆಲವಷ್ಟೇ ರೈತರು ಭೂಮಿಯನ್ನು ಬಿಟ್ಟುಕೊಟ್ಟರೂ, ದೀರ್ಘಾವಧಿಯಲ್ಲಿ ಉಳಿದ ರೈತರಿಗೂ ಆರ್ಥಿಕ ಲಾಭದ ಆಸೆ ಮೊಳಕೆಯೊಡೆದು ತಮ್ಮ ಭೂಮಿಯನ್ನು ಸಹ ಮಾರುವ ಸ್ವಯಂ ಒತ್ತಡ ಸೃಷ್ಟಿಸಬಹುದು. ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಹಾಗೂ ಕೃಷಿಯಲ್ಲಿ ಮುಂದುವರಿಯುವ ಅಗ್ನಿದಿವ್ಯವನ್ನು ಹಾಯುವ ಅವಕಾಶ ಈಗ ರೈತರೆದುರು ಇದೆ. ಆದರೆ ರಾಜ್ಯದ ಅಭಿವೃದ್ಧಿ ಮತ್ತು ಕೈಗಾರಿಕೆಗಳಿಗೆ ಜಮೀನು ಒದಗಿಸಲು ಸರ್ಕಾರ ವಿಫಲವಾದರೆ ಬೇರೊಂದು ರಾಜ್ಯಕ್ಕೆ ಉದ್ಯಮಿಗಳು ಪಲಾಯನಗೊಳ್ಳುವ ಅವಕಾಶಗಳಿದ್ದು, ಈ ಭೂಸ್ವಾಧೀನ ರದ್ದಿನ ಹಿನ್ನೆಲೆಯಲ್ಲಿ ನೆರೆಯ ಆಂಧ್ರಪ್ರದೇಶದ ಸರ್ಕಾರ ಉದ್ಯಮಿಗಳನ್ನು ತನ್ನ ರಾಜ್ಯಕ್ಕೆ ಆಹ್ವಾನಿಸಿ ದೇವನಹಳ್ಳಿಯಿಂದ ಕೇವಲ ೧೦೦ ಕಿ.ಮೀ. ಅಂತರದಲ್ಲಿ ಸರ್ಕಾರದ ಜಮೀನನ್ನು ನೀಡಲು ಮುಂದಾಗಿರುವ ಬೆಳವಣಿಗೆಯಾಗಿರುತ್ತದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಉದ್ಯಮಿಗಳಿಗೆ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ತೊಡುಕಾಗಿರುವ ಈ ಭೂಸ್ವಾಧೀನ ಸಮಸ್ಯೆಯನ್ನು ಕಾಂಗ್ರೆಸ್ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂದು ಕಾದುನೋಡಬೇಕಾಗಿದೆ.
ವಿಜಯ್ ಬೆಂಗಾವಲಿ



