ಸರ್ಕಾರದ ಮೀನಾಮೇಷ ಬೆಂಗಳೂರು ಉಪನಗರಗಳ ವರ್ತುಲ ರಸ್ತೆ : ವಿಳಂಬ

ಸರ್ಕಾರದ ಮೀನಾಮೇಷ ಬೆಂಗಳೂರು ಉಪನಗರಗಳ ವರ್ತುಲ ರಸ್ತೆ : ವಿಳಂಬ

ಉದ್ಯಾನನಗರಿ, ಮಾಹಿತಿ ತಂತ್ರಜ್ಞಾನ ನಗರ, ಸಿಲಿಕಾನ್ ಸಿಟಿ ಎಂಬಿತ್ಯಾದಿ ಕೀರ್ತಿಗೆ ಪಾತ್ರವಾಗಿರುವ ನಮ್ಮ ಬೆಂಗಳೂರು ವಿಶ್ವದ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ನಿರೀಕ್ಷೆಗೂ ಮೀರಿದ ಬೆಳವಣಿಗೆಯಿಂದಾಗಿ ಇಡೀ ಜಗತ್ತು ಬೆಂಗಳೂರನ್ನು ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದೆ. ಇಲ್ಲಿ ಮೂಲಸೌಕರ್ಯಗಳು ದೇಶ-ವಿದೇಶಗಳ ಉದ್ಯಮಿಗಳನ್ನು ವಿಶೇಷವಾಗಿ ಆಕರ್ಷಿಸುತ್ತಿವೆ. ವಿಸ್ಮಯನಗರಿ ಬೆಂಗಳೂರಿನ ವೇಗದ ಬೆಳವಣಿಗೆಯು ನಗರದ ಪ್ರಮುಖ ಮೂಲಸೌಕರ್ಯದ ಸಾಮರ್ಥ್ಯವನ್ನು ಮೀರಿ ಬೆಳೆದಿದ್ದು, ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಯು ನಗರದ ಹೊರವಲಯವನ್ನೂ ವಿಸ್ತರಿಸಿ ವ್ಯಾಪಿಸಿದೆ. ಸ್ಯಾಟಲೈಟ್ ಟೌನ್ ರಿಂಗ್‌ರಸ್ತೆ (ಎಸ್‌ಟಿಆರ್‌ಆರ್) ಈಗ ರಿಯಲ್ ಎಸ್ಟೇಟ್ ಉದ್ಯಮಕ್ಕೆ ವರದಾನವಾಗಿದೆ. 288 ಬೆಂಗಳೂರು ಮಹಾನಗರದ ಸುತ್ತಲೂ ಇರುವ 12 ಸ್ಯಾಟಲೈಟ್ ಟೌನ್‌ಗಳನ್ನೂ (ಉಪನಗರಗಳು) ಸಂಪರ್ಕಿಸುವ -ಕಿಲೋಮೀಟರ್ ಎಕ್ಸ್ಪ್ರೆಸ್‌ವೇ ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಪ್ರತಿಯೊಂದೂ ಬೆಳವಣಿಗೆಗೆ ವೇಗವರ್ಧನೆ ನೀಡಲು ನಿರ್ಣಾಯಕ ಪಾತ್ರ ವಹಿಸುವಲ್ಲಿ ಗಮನ ಸೆಳೆದಿದೆ. ಎಸ್‌ಟಿಆರ್‌ಆರ್ ಕೇವಲ ನಗರದ ಸುತ್ತ ಸಂಚಾರವನ್ನು ಸುಗಮಗೊಳಿಸುವುದಲ್ಲದೆ, ಜನರ ಜೀವನಮಟ್ಟ ಸುಧಾರಣೆ, ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಯನ್ನು ಪುನರ್ ವ್ಯಾಖ್ಯಾನಿಸುತ್ತದೆ. ಈ ವಿಶಾಲ ಪ್ರದೇಶದಲ್ಲಿ ಯೋಜಿತ, ವಿಕೇಂದ್ರೀಕೃತ ನಗರ ಬೆಳವಣಿಗೆಯ ಮುಂದಿನ ಪ್ರಗತಿ ಹಂತಕ್ಕೆ ಸದೃಢ ವೇದಿಕೆಯನ್ನು ಸಿದ್ಧಪಡಿಸುತ್ತದೆ.
ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್‌ರಸ್ತೆ (ಎಸ್‌ಟಿಆರ್‌ಆರ್) 288 ಕಿ.ಮೀ.ಗಳ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್‌ವೇ ಆಗಿದೆ, ಇದರಲ್ಲಿ 243 ಕಿ.ಮೀ. ಕರ್ನಾಟಕದಲ್ಲಿ ಮತ್ತು 45 ಕಿ.ಮೀ. ತಮಿಳುನಾಡಿನಲ್ಲಿ ಭಾರತಮಾಲಾ ಪರಿಯೋಜನಾ ಯೋಜನೆಯಡಿ ಇದೆ. ಎಸ್‌ಟಿಆರ್‌ಆರ್ 12 ಉಪನಗರಗಳನ್ನು ಅಂದರೆ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಕನಕಪುರ, ರಾಮನಗರ, ಅತ್ತಿಬೆಲೆ, ಆನೇಕಲ್, ಮಾಗಡಿ, ಸರ್ಜಾಪುರ, ಬಿಡದಿ ಮತ್ತು ದಾಬಸ್‌ಪೇಟೆ ಪಟ್ಟಣದ ಸುತ್ತುವರಿದು ಬೆಂಗಳೂರಿನ ಭೌಗೋಳಿಕ ಪ್ರದೇಶವನ್ನು ವೃತ್ತಾಕಾರದ ಕಾರಿಡಾರ್‌ಗೆ ಸಂಪರ್ಕಿಸುವ ಮಹತ್ವದ ಯೋಜನೆಯಾಗಿದೆ. ಎಸ್‌ಟಿಆರ್‌ಆರರ್ 6 ರಾಷ್ಟ್ರೀಯ ಹೆದ್ದಾರಿಗಳು ಮತ್ತು 8 ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ, ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸಲು, ಸಂಚಾರ ದಟ್ಟಣೆಯನ್ನು ನಿವಾರಿಸಲು ಮತ್ತು ಅಗತ್ಯ ಸಮಯದೊಳಗೆ ನಗರ ಅಭಿವೃದ್ಧಿಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ೨೦೨೭ರೊಳಗೆ ಈ ಮಹತ್ವಕಾಂಕ್ಷಿ ಯೋಜನೆ ಸಂಪೂರ್ಣವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಸುಧಾರಿತ ಅಂತರ್-ಸಂಪರ್ಕ/ಸುರಕ್ಷಿತ ಪ್ರಯಾಣದ ಸೌಲಭ್ಯಗಳು ಎಸ್‌ಟಿಆರ್‌ಆರ್‌ನ 12 ಉಪನಗರಗಳ ನಡುವೆ ಸದೃಢ ಸಂಪರ್ಕವನ್ನು ಬಲಪಡಿಸುತ್ತದೆ. ಹೀಗಾಗಿ ಹೊರ ವರ್ತುಲ ರಸ್ತೆ (ಔಟರ್ ರಿಂಗ್‌ರೋಡ್-ಓಆರ್‌ಆರ್)ಮತ್ತು ರಾಷ್ಟ್ರೀಯ ಹೆದ್ದಾರಿಗಳ (ನ್ಯಾಷನಲ್ ಹೈವೇ-ಎನ್‌ಎಚ್) ಮೇಲಿನ ಭಾರೀ ಒತ್ತಡವನ್ನು ಕಡಿಮೆ ಮಾಡುತ್ತದೆ. ವೇಗದ ಪ್ರಯಾಣ ಮತ್ತು ಕಡಿಮೆ ಸಂಚಾರ ದಟ್ಟಣೆಯು ಜೀವನ ಸುಧಾರಣೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೈನಂದಿನ ಚಟುವಟಿಕೆಗಳಿಗಾಗಿ ಉತ್ತಮ ಪ್ರಯಾಣಕ್ಕೆ ಕೊಡುಗೆ ನೀಡುತ್ತದೆ. ಒಟ್ಟಾರೆ ಇವೆಲ್ಲವೂ ವಿವಿಧ ಕ್ಷೇತ್ರಗಳಲ್ಲಿ ನಿರೀಕ್ಷಿತ ಬೆಳವಣಿಗೆ ಸಾಧಿಸಲು ನೆರವಾಗುತ್ತವೆ.
ದೇವನಹಳ್ಳಿ, ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ ಮೂಲಸೌಕರ್ಯ ಮತು ಕೈಗಾರಿಕೆ ಬೆಳವಣಿಗೆಯ ಆಧಾರದ ಮೇಲೆ ಅತಿ ಹೆಚ್ಚು ಆರ್‌ಒಐ (ರಿಟರ್ನ್ ಆನ್ ಇನ್‌ವೆಸ್ಟೆಮೆಂಟ್-ಬಂಡವಾಳ ಹೂಡಿಕೆಗೆ ಲಾಭ) ಹೊಂದಿರುವ ವಿಫುಲ ಅವಕಾಶಗಳ ಹೂಡಿಕೆ ಕೇಂದ್ರ ಪ್ರದೇಶಗಳಾಗುತ್ತವೆ, ಆದರೆ ಮಾಗಡಿ, ಅತ್ತಿಬೆಲೆ ಮತ್ತು ಕನಕಪುರ ಕಡಿಮೆ ಪ್ರವೇಶ ಮಟ್ಟದ ಹೂಡಿಕೆಯೊಂದಿಗೆ ದೀರ್ಘಕಾಲೀನ ಸಾಮರ್ಥ್ಯವನ್ನು ಹೊಂದಿವೆ. ಹೂಡಿಕೆದಾರರು ಸೂಕ್ತ ಕೈಗಾರಿಕೆಗಳು, ನಿವೇಶನಗಳು, ಗೋದಾಮು, ಭೂಮಿ ಅಥವಾ ಸಮಗ್ರ ಗೇಟೆಡ್ ಸಮುದಾಯಗಳನ್ನು ಹುಡುಕುತ್ತಿದ್ದಾರೆ. ಎಸ್‌ಟಿಆರ್‌ಆರ್ ವಿಕೇಂದ್ರೀಕೃತ ನಗರೀಕರಣವನ್ನು ಉತ್ತೇಜಿಸುತ್ತಿದೆ ಮತ್ತು ಈ ಉಪನಗರ ಪಟ್ಟಣಗಳನ್ನು 2027 ರ ವೇಳೆಗೆ ಸ್ವಾವಲಂಬಿ ನಗರ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಸ್ಯಾಟಲೈಟ್ ಟೌನ್‌ರಿಂಗ್‌ರಸ್ತೆ (ಎಸ್‌ಟಿಆರ್‌ಆರ್) ಕೇವಲ ಸಾರಿಗೆ ಕಾರಿಡಾರ್‌ಗಿಂತ ಹೆಚ್ಚಾಗಿ, ಬೆಂಗಳೂರಿನ ನಗರ ಅಭಿವೃದ್ಧಿಯ ವಿಕೇಂದ್ರೀಕರಣಕ್ಕಾಗಿ ಒಂದು ಮಾಸ್ಟರ್ ಪ್ಲಾನ್‌ಆಗಿದೆ. 12 ಉಪನಗರಗಳು ನಗರ ಹೊರವಲಯದಿಂದ ಉನ್ನತ-ಸಾಮರ್ಥ್ಯದ ಆಸ್ತಿ ಮಾರುಕಟ್ಟೆಗಳಾಗಿ ಹೊರಹೊಮ್ಮುವುದರೊಂದಿಗೆ, ಇದು ಗ್ರೇಟರ್ ಬೆಂಗಳೂರಿನ ಭವಿಷ್ಯವನ್ನು ರೂಪಿಸುತ್ತಿದೆ. ಭಾರತ್‌ಮಾಲಾ ಪರಿಯೋಜನೆ ಲಾಟ್-3ರ ಅಡಿಯಲ್ಲಿ ಬರುವ ಈ ಗ್ರೀನ್‌ಫೀಲ್ಡ್ ಎಕ್ಸ್ಪ್ರೆಸ್‌ವೇ ಬೆಂಗಳೂರು ನಗರದ ಸುತ್ತಲೂ ಬೈಪಾಸ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು 3 ಸಮಾನಾಂತರ ಹಂತಗಳಲ್ಲಿ ನಿರ್ಮಿಸಲಾಗುತ್ತಿದ್ದು, NH-948A ನಿರ್ಮಾಣ ಮತ್ತು ಅಸ್ತಿತ್ವದಲ್ಲಿರುವ NH-648 (ಹಳೆಯ NH-207)ನ ಮರುಜೋಡಣೆಯನ್ನು ಒಳಗೊಂಡಿರುತ್ತದೆ. STRR ಯೋಜನೆಯು ಡಿಸೆಂಬರ್ 2025 ರವರೆಗೆ ಪೂರ್ಣಗೊಳಿಸಲು ಗುರಿಯೊಂದಿಗೆ ಕೇಂದ್ರ ಸರ್ಕಾರವು ರಾಜ್ಯಸರ್ಕಾರಗಳ ಸಹಯೋಗದೊಂದಿಗೆ ಯೋಜನೆ ಪ್ರಾರಂಭಿಸಲಾಗಿ ರಸ್ತೆಯ ನಿರ್ಮಾಣ ಕಾಮಗಾರಿಯು ಕಾರ್ಯಗೊಳಿಸಲಾಗುತ್ತಿದ್ದು ವಿವರವಾದ ಯೋಜನಾ ವರದಿ (DPR) ಅನ್ನು ಲೂಯಿಸ್ ಬರ್ಗರ್ ಗ್ರೂಪ್ ಇಂಕ್ ಮತ್ತು KITKO(ಹೊಸೂರು-ಸರ್ಜಾಪುರ ವಿಭಾಗ ಮಾತ್ರ) ಸಿದ್ಧಪಡಿಸಿವೆ. ಯೋಜನೆಗಾಗಿ ಭೂಸ್ವಾಧೀನವು 2018ರಲ್ಲಿ ಪ್ರಾರಂಭವಾಯಿತು. ಕರ್ನಾಟಕದಲ್ಲಿ ಒಟ್ಟು 1009.8 ಹೆಕ್ಟೇರ್ ಮತ್ತು ತಮಿಳುನಾಡಿನಲ್ಲಿ 340 ಹೆಕ್ಟೇರ್ ಅಗತ್ಯವಿದೆ. ಈ ಎಕ್ಸ್ಪ್ರೆಸ್‌ವೇ NHAIನಿಂದ ಪ್ರಸ್ತಾವಿತ 330 ಕಿಮೀ ಬೆಂಗಳೂರು-ಮಂಗಳೂರು ಎಕ್ಸ್ಪ್ರೆಸ್‌ವೇಯ ಪೂರ್ವ ಅಂತ್ಯವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಜೋಡಣೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (BNP) ಪರಿಸರ ಸೂಕ್ಷ್ಮವಲಯ (ESZ) ಮೂಲಕ ಕಿಮೀ 95.525 ರಿಂದ ಕಿಮೀ 138.00000 ವರೆಗೆ ಹಾದುಹೋಗುತ್ತದೆ ಮತ್ತು 28.50 ಮೀ ಸಾಲು ಹೊಂದಿರುವ ಅದರ ಮಧ್ಯಭಾಗದ ಮೂಲಕ 8.1 ಕಿಮೀ ಎತ್ತರದ ಹೆದ್ದಾರಿ ರಸ್ತೆಯನ್ನು ಒಳಗೊಂಡಿದೆ. ಇದು ಪೂರ್ಣಗೊಂಡ ನಂತರ ಎಷ್ಟರ ಮಟ್ಟಿಗೆ ಜನರ ಜೀವನ ಮಟ್ಟ ಸುಧಾರಣೆಯಾಗುತ್ತದೆ ಮತ್ತು ಬೆಂಗಳೂರು ಸುತ್ತಮುತ್ತ ಗ್ರಾಮಾಂತರ ಜನರಿಗೆ ಉಪಯೋಗವಾಗಿ ವಾಹನ ದಟ್ಟಣೆ ನಿವಾರಣೆಯಾಗಿ ಅನುಕೂಲವಾಗುತ್ತವೆಂಬುದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

Back To Top