ನಾಗವಾರ ಕಡೆಯಿಂದ ಹೆಬ್ಬಾಳ ಜಂಕ್ಷನ್ ಫ್ಲೆೈ ಓವರ್ ನಿರ್ಮಾಣ – ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ
ಹೆಬ್ಬಾಳ ಜಂಕ್ಷನ್‌ನಲ್ಲಿ ನಾಗವಾರ ಕಡೆಯಿಂದ ಮತ್ತೊಂದು ಹೊಸ ಮೇಲ್ಸೇತುವೆ (ಹೊಸಪಥ) ನಿರ್ಮಿಸಲು ಬಿಡಿಎ ಮುಂದಾಗಿದ್ದು, ಇದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಕಡೆಗೆ ಸಂಚಾರವನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ. ನಾಗವಾರದ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಗೆ ನೇರವಾಗಿ ಸಂಪರ್ಕಿಸುವ ಪ್ರಸ್ತಾವಿತ ಮೇಲ್ಸೇತುವೆಯ ಯೋಜನಾ ವರದಿ (ಡಿಪಿಆರ್) ತಯಾರಿಸಲು ಅನುಮತಿ ಈಗಾಗಲೇ ದೊರೆತಿದ್ದು, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಹನ ಸಾಂದ್ರತೆ ತಗ್ಗಿಸಲು ಈ ಯೋಜನೆ ಅನುಕೂಲವಾಗಬಹುದು ಎಂದು ಅಂದಾಜಿಸಲಾಗಿದೆ.
ಹೆಬ್ಬಾಳ ಜಂಕ್ಷನ್‌ನಲ್ಲಿನ ಸಂಚಾರ ದಟ್ಟಣೆ ಪರಿಹರಿಸಲು ಬಿಡಿಎ 2019ರಲ್ಲಿ ಮೇಲ್ಸೇತುವೆ ಯೋಜನೆ ರೂಪಿಸಿ 25 ಕೋಟಿ ರೂ. ವೆಚ್ಚದಲ್ಲಿ 11 ಬೃಹತ್ ಕಂಬಗಳನ್ನು ನಿರ್ಮಿಸಿತ್ತು. ಆದರೆ, ಯೋಜಿತ ರ‍್ಯಾಂಪ್ ಜೋಡಣೆಯು ಭವಿಷ್ಯದ ಮೆಟ್ರೋ ಮಾರ್ಗಗಳಿಗೆ ಅಡ್ಡಿಪಡಿಸುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅಂದು ರ‍್ಯಾಂಪ್ ಯೋಜನೆಯನ್ನು ಕೈಬಿಡಲಾಗಿತ್ತು. ಇದರಿಂದ ಜಂಕ್ಷನ್ ಬಳಿಯ ಮರದ ಉದ್ಯಾನವನದೊಳಗೆ ಅಪಾರ ಹಣ ಖರ್ಚು ಮಾಡಿ ನಿರ್ಮಿಸಿದ್ದ ಸಿಮೆಂಟ್ ಕಂಬಗಳು ಹಾಗೆ ಉಳಿದುಕೊಂಡಿವೆ. ಇದೀಗ, ಬಿಎಂಆರ್‌ಸಿಎಲ್ ಆಕ್ಷೇಪಣೆ ಇಲ್ಲದ್ದರಿಂದ ಹೊಸ ಮೇಲ್ಸೇತುವೆ ಯೋಜನೆಗೆ ಹಸಿರು ನಿಶಾನೆ ತೋರಿದೆ. ಈ ಯೋಜನೆಯ ವೆಚ್ಚವನ್ನು ಕಡಿಮೆ ಮಾಡಲು ಮತ್ತು ನಿರ್ಮಾಣದಿಂದ ಉಂಟಾಗುವ ಅಡಚಣೆಯನ್ನು ಕಡಿಮೆ ಮಾಡಲು ಬಿಡಿಎ ಈಗಾಗಲೇ ನಿರ್ಮಿಸಿರುವ ಕಂಬಗಳನ್ನು ಮರುಬಳಕೆ ಮಾಡುವ ಕುರಿತು ಚಿಂತನೆ ನಡೆಸಿದೆ. ಸದ್ಯ ಇರುವ ಕಂಬಗಳನ್ನು ಹೊಸ ಫ್ಲೆೈಓವರ್‌ನ ವಿನ್ಯಾಸದಲ್ಲಿ ಸುರಕ್ಷಿತವಾಗಿ ಸಂಯೋಜಿಸಬಹುದೇ ಎಂದು ಚರ್ಚೆಯೂ ನಡೆದಿದೆ.
ಹೊಸ ಫ್ಲೆೈಓವರ್ 700 ಮೀಟರ್ ಉದ್ದವಿರುತ್ತದೆ. ಜತೆಗೆ ನಗರದ ಸಂಚಾರದ ವಿಷಯದಲ್ಲಿ ಪ್ರಮುಖ ಸಂಪರ್ಕ ಕೊಂಡಿ ಆಗಲಿದೆ. ನಾಗವಾರದಿಂದ ತುಮಕೂರು ರಸ್ತೆ, ಮೇಖ್ರೀ ವೃತ್ತ, ಬಿಇಎಲ್ ವೃತ್ತ ಮತ್ತು ಕೆಐಎ ಕಡೆಗೆ ಪ್ರಯಾಣಿಸುವ ಪ್ರಯಾಣಿಕರ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಇದು ಪೂರಕವಾಗಲಿದೆ ಎಂಬುದು ಬಿಡಿಎ ಅಭಿಪ್ರಾಯವಾಗಿದೆ. ನಾಗವಾರ ಕಡೆಯಿಂದ ಬರುವ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ರ‍್ಯಾಂಪ್ ಇಲ್ಲದಿರುವುದು ವಾಹನ ಸವಾರರಿಗೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಹೆಬ್ಬಾಳ ಮೇಲ್ಸೇತುವೆಗೆ ನೇರ ಪ್ರವೇಶವಿಲ್ಲದ ಕಾರಣ ಅನೇಕ ಪ್ರಯಾಣಿಕರು ಕೆಂಪಾಪುರದ ವೃತ್ತದ ಮೂಲಕ ಎಸ್ಟೀಮ್ ಮಾಲ್ ಬಳಿಯ ಸರ್ವಿಸ್ ರಸ್ತೆಯನ್ನು ಬಳಸಿ ಮುಖ್ಯ ಮೇಲ್ಸೇತುವೆಗೆ ತಲುಪಬೇಕಾಗುತ್ತದೆ. ಇದು ಪ್ರಯಾಣದ ಸಮಯವನ್ನು ಹೆಚ್ಚಿಸುವುದಲ್ಲದೆ, ಸಂಚಾರ ದಟ್ಟಣೆಗೂ ಕಾರಣವಾಗಿದೆ.
ಹೆಬ್ಬಾಳ ಕೆರೆಯ ಪಕ್ಕದಲ್ಲಿರುವ ರಸ್ತೆಗಳ ವಿಸ್ತರಣೆ ಕಾರ್ಯವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಇದರಿಂದ ಭೂಸ್ವಾಧೀನ ಸೇರಿ ಮತ್ತಿತರ ಅಡೆತಡೆಗಳಿಲ್ಲದೆ ಹೊಸ ಫ್ಲೆೈಓವರ್‌ನ ಕೆಳಮುಖ ರ‍್ಯಾಂಪ್ ಅನ್ನು ನಿರ್ಮಿಸಬಹುದು ಎನ್ನುತ್ತಾರೆ ಬಿಡಿಎ ಅಧಿಕಾರಿಗಳು.
ಮೇಲ್ಸೇತುವೆ ಯೋಜನೆ ಇನ್ನೂ ಆರಂಭಿಕ ಯೋಜನಾ ಹಂತದಲ್ಲಿದ್ದು, ನಿರ್ಮಾಣದ ಸಮಯ ಮತ್ತಿತರ ವಿಷಯಗಳು ಅಂತಿಗೊಳ್ಳಬೇಕಿದೆ. ಈಗಾಗಲೇ ನಿರ್ಮಿಸಿ ಕೈಬಿಡಲಾದ ಕಂಬಗಳನ್ನು ಮರುಬಳಕೆ ಮಾಡಿಕೊಂಡರೆ ಕಾಮಗಾರಿ ಮತ್ತಷ್ಟು ತ್ವರಿತಗೊಳಿಸಬಹುದೆ ಎಂಬ ಬಗ್ಗೆ ಮತ್ತು ಕಾಮಗಾರಿಯ ಪ್ರಾರಂಭಿಕ ಹಂತದ ಅನುಮೋದನೆಗಳನ್ನು ಪಡೆಯಲು ಬಿಡಿಎ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆಂದು ಬಿಡಿಎ ಮೂಲಗಳಿಂದ ತಿಳಿದು ಬಂದಿರುತ್ತದೆ.


