ಐಪಿಎಲ್ ಸಂಭ್ರಮ ಮತ್ತು ಸರ್ಕಾರದ ವೈಫಲ್ಯ

ಐಪಿಎಲ್ ಸಂಭ್ರಮ ಮತ್ತು ಸರ್ಕಾರದ ವೈಫಲ್ಯ

ಕನ್ನಡಿಗರ ನಾಡು ಕರ್ನಾಟಕದಲ್ಲಿ ಕ್ರಿಕೆಟ್ ಆಟವನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಆದರಿಸುತ್ತಾರೆ. ಅದರಲ್ಲೂ ನಮ್ಮ ಬೆಂಗಳೂರಿನ ಪ್ರತಿಭಾನ್ವಿತ ಕ್ರಿಕೆಟ್ ಕಲಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯಿಂದ ಭಾರತ ತಂಡವನ್ನು ಪ್ರತಿನಿಧಿಸಿ ಹಲವಾರು ಭಾರತದ ಗೆಲುವಿನ ರುವಾರಿಗಳಾಗಿರುತ್ತಾರೆ. 75 ವರ್ಷಗಳಿಂದಲೂ ವಿಶೇಷವಾಗಿ ಬಿ.ಎಸ್.ಚಂದ್ರಶೇಖರ್, ಬುದ್ಧಿ ಕುಂದರಮ್, ರ‍್ರಪಳ್ಳಿ ಪ್ರಸನ್ನ, ಜಿ.ಆರ್.ವಿಶ್ವನಾಥ್, ಬ್ರಿಜೇಶ್ ಪಟೇಲ್, ರಾಹುಲ್ ದ್ರಾವಿಡ್, ಸುನೀಲ್ ಜೋಶಿ, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಸದಾನಂದ ವಿಶ್ವನಾಥ್, ಸಯ್ಯದ್ ಕರ‍್ಮಾನಿ ಮುಂತಾದ ಕ್ರೀಡಾಪಟುಗಳು ಭಾರತ ತಂಡದಲ್ಲಿ ಪ್ರಜ್ವಲಿಸಿದ್ದು ಇಂದಿಗೂ ಕೆ.ಎಲ್.ರಾಹುಲ್, ಕರುಣ್ ನಾಯರ್, ವೈಶಾಖ್ ವಿಜಯ್‌ಕುಮಾರ್, ಪ್ರಸಿದ್ಧಿ ಕೃಷ್ಣ ಮತ್ತು ಮನೀಶ್ ಅಗರ್‌ವಾಲ್ ಪ್ರತಿಭಾ ಪಟುಗಳಾಗಿ ವಿಜೃಂಭಿಸುತ್ತಿದ್ದಾರೆ. ಈ ಮಧ್ಯೆ 20-20 ಪಂದ್ಯಗಳಲ್ಲಿ ಐಪಿಎಲ್ ಸರಣಿಯಲ್ಲಿ ಬೆಂಗಳೂರು ಪ್ರತಿನಿಧಿಸುವ ಆರ್‌ಸಿಬಿ ತಂಡವನ್ನು ವಿಜಯ ಮಲ್ಯರವರು 2008ರಲ್ಲಿ ಪ್ರಾಯೋಜಿಸಿದ್ದು ಉತ್ತಮ ಪ್ರದರ್ಶನದ ಮೂಲಕ ಹಲವಾರು ಪಂದ್ಯಗಳನ್ನು ಗೆಲ್ಲುತ್ತಿದ್ದು 17 ವರ್ಷಗಳಲ್ಲಿ ನಾಲ್ಕು ಬಾರಿ ಫೈನಲ್ ಹಂತವನ್ನು ತಲುಪಿ ಗೆಲ್ಲುವ ಹಂತದಲ್ಲಿ ಎಡವಿ ಟ್ರೋಫಿ ಗೆಲ್ಲದೆ ನಿರಾಶೆಯನ್ನುಂಟು ಮಾಡಿರುತ್ತಾರೆ. ಆದರೂ ಆರ್‌ಸಿಬಿ ತಂಡಕ್ಕೆ ಬೆಂಗಳೂರಿನ ಅಭಿಮಾನಿಗಳು ಸಂಪೂರ್ಣ ಬೆಂಬಲ ಹಾಗೂ ನೈತಿಕ ಸ್ಥೆೈರ್ಯವನ್ನು ನೀಡುತ್ತಲೇ ಬಂದು ಈ ಸಲ ಕಪ್ ನಮ್ಮದೇ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರೋತ್ಸಾಹಿಸಿ ಜೈಕಾರಗಳನ್ನು ಕೂಗುತ್ತಾ ಪ್ರತಿಪಂದ್ಯದಲ್ಲು ಕಾತರತೆ ಮತ್ತು ಉತ್ಸಾಹದಿಂದ ತಂಡದ ಎಲ್ಲಾ ಸದಸ್ಯರನ್ನು ಹುರಿದುಂಬಿಸುತ್ತಿದ್ದರು.
ಆದರೆ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಹೆಸರನ್ನು ಹೃದಯದಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದು ೭ ಕೋಟಿ ಕನ್ನಡಿಗರ ಆಸೆಯು ಕಳೆದ 18 ವರ್ಷಗಳಿಂದ ನಮ್ಮ ಆರ್‌ಸಿಬಿ ತಂಡ ಕಪ್ ಗೆಲ್ಲಬೇಕೆಂಬ ಕನಸು ನನಸಾಗುತ್ತದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಮೇ 27 ರಂದು ನಡೆದ ಫಸ್ಟ್ ಸೆಮಿ ಫೈನಲ್‌ನಲ್ಲೇ ದೊಡ್ಡ ಸಂಭ್ರಮದ ಸುದ್ದಿ ಸಿಕ್ಕಿತ್ತು. ಜೂನ್ 3 ಮಂಗಳವಾರ ರಾತ್ರಿ ಅಂತಿಮ ಪಂದ್ಯದಲ್ಲಿ ನಮ್ಮ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ರೋಚಕ ಘಟ್ಟದಲ್ಲಿ ಸೋಲಿಸಿ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಿತು.
ಈ ಗೆಲುವಿನಿಂದ ಆರ್‌ಸಿಬಿ ತಂಡವನ್ನು ಕಣ್ತುಂಬಿಕೊಳ್ಳುವ ತವಕ ಸಹಜವಾಗಿಯೇ ಅಭಿಮಾನಿಗಳಲ್ಲಿ ಮೂಡಿ ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಅಂತಿಮ ಪಂದ್ಯದ ಟಾಸ್ ಪ್ರಕ್ರಿಯೆ ಆರಂಭವಾಗುವ ಹೊತ್ತಿನಲ್ಲೇ ವಿಜಯೋತ್ಸವ ಆಚರಣೆ ಮಾಡುವ ಬಗ್ಗೆ ಉನ್ಮಾದ ಮತ್ತು ಉತ್ಸಾಹ ತುಂಬಿ ಹರಿಯುತ್ತಿತ್ತು. ಏತನ್ಮಧ್ಯೆ 18 ವರ್ಷಗಳ ನಂತರ ಕಪ್ ಗೆದ್ದ ಆರ್‌ಸಿಬಿ ತಂಡಕ್ಕೆ ಇಡೀ ರಾತ್ರಿ ದೇಶದ ಮೂಲೆ ಮೂಲೆಗಳಿಂದಲೂ ಹತ್ತಾರು ಪಟ್ಟಣ-ನಗರಗಳಲ್ಲಿ ಆರ್‌ಸಿಬಿ ಅಭಿಮಾನಿಗಳ ವಿಜಯದ ಸಂಭ್ರಮವನ್ನು ಬೆಳಗಿನ ಹೊತ್ತಿನವರೆಗೂ ಆಚರಿಸುತ್ತಲೇ ಇದ್ದರು. ಈ ಉನ್ಮಾದವು ಬೆಂಗಳೂರಿನ ರಾಜಕೀಯ ಆಯಕಟ್ಟಿನ ನಾಯಕರು, ಕೆ.ಎಸ್.ಸಿ.ಎ. ಮತ್ತು ಆರ್‌ಸಿಬಿ ತಂಡದ ಉಸ್ತುವಾರಿ ಹೊತ್ತಂತಹ ಅಧಿಕಾರಿಗಳು ಜಯದ ಆನಂದದಲ್ಲಿ ವಿಜಯೋತ್ಸವ ಆಚರಿಸಲು ನಿರ್ಧರಿಸಿದರು.
ಬೆಳಗಾಗುವಷ್ಟರಲ್ಲಿ ಆರ್‌ಸಿಬಿ ಫ್ರಾಂಜೈಸಿ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೇ ಇದ್ದರೂ ಬುಧವಾರ ಮಧ್ಯಾಹ್ನ ವಿಧಾನಸೌಧದ ಮೆಟ್ಟಿಲ ಮೇಲೆ ಸರ್ಕಾರದಿಂದ ಸನ್ಮಾನ ಮತ್ತು ಸಂಜೆ ಕ್ರೀಡಾಂಗಣದಲ್ಲಿ ವಿಜಯೋತ್ಸವ ಮತ್ತು ವಿಧಾನಸೌಧದಿಂದ ಕ್ರೀಡಾಂಗಣದವರೆಗೆ ವಿಕ್ಟರಿ ಪರೇಡ್‌ಗೆ (ಆಟಗಾರರ ಮೆರವಣಿಗೆ) ನಡೆಸಲು ಉದ್ದೇಶಿಸಿದ್ದು ಸಾರ್ವಜನಿಕರು ಹಾಗೂ ಅಭಿಮಾನಿಗಳು ಸೇರಬೇಕೆಂದು ಏಕಪಕ್ಷೀಯ ನಿರ್ಧಾರ ಕೈಗೊಂಡು ‘ಟ್ವೀಟರ್ ಎಕ್ಸ್’ ಖಾತೆಯಲ್ಲಿ ಸಂದೇಶ ರವಾನಿಸಿತು. ಈ ಸಂದೇಶದಲ್ಲಿ ಕ್ರೀಡಾಂಗಣದ ಪ್ರವೇಶಕ್ಕೆ ಉಚಿತ ಟಿಕೆಟ್ ನೀಡಲಾಗುವುದು ಎಂದು ತನ್ನ ವೆಬ್‌ಸೈಟ್‌ನಲ್ಲಿ ಆರ್‌ಸಿಬಿ ಪ್ರಕಟಣೆ ಹೊರಡಿಸಿ ಅತ್ತ ಸರ್ಕಾರವು ಪೊಲೀಸ್ ಇಲಾಖೆಯ ಸಲಹೆಯನ್ನು ಗಂಭೀರವಾಗಿ ಪರಿಗಣಿಸದೇ ವಿಧಾನಸೌಧ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸುವುದಾಗಿ ಹೇಳಿತು.
ತರಾತುರಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕುಭೇಂದ್ ಘೋಷ್ ಅವರು ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ, ಆರ್‌ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದ್ದು ತಂಡವು ಅಂದೇ ಅಂದರೆ 4ನೇ ತಾರೀಖು ಬುಧವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನಿಸಲಾಗುವುದೆಂದು ತಿಳಿಸಿ ಪತ್ರವನ್ನು ನೀಡಿ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಠಾಣೆಯ ಇನ್ಸ್ಪೆಕ್ಟರ್ ಗಿರೀಶ್ ಅವರಿಗೆ ಮನವಿ ಮಾಡಿರುತ್ತಾರೆ.
ಇದರ ಬೆನ್ನಲ್ಲೇ, ಉಪಮುಖ್ಯಮಂತ್ರಿಯವರ ಹೇಳಿಕೆ, ಅದರ ಬೆನ್ನಲ್ಲೇ ಮುಖ್ಯಮಂತ್ರಿಯವರ ‘ಎಕ್ಸ್’ ಹೇಳಿಕೆಗಳು ಹೊರಬಿದ್ದು, ವಿಧಾನಸೌಧದ ಮೆಟ್ಟಿಲಿನ ಮೇಲೆ ಆರ್‌ಸಿಬಿ ತಂಡವನ್ನು ಸನ್ಮಾನಿಸುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ಆರ್‌ಸಿಬಿ ತಂಡವನ್ನು ಎದುರುಗೊಳ್ಳಲು ಅಲ್ಲಿಗೆ ತೆರಳಿದ ಉಪಮುಖ್ಯಮಂತ್ರಿಯವರು ಆಟಗಾರರನ್ನು ವಿಶೇಷ ಭದ್ರತೆಯಡಿ ನಗರಕ್ಕೆ ಕರೆತಂದರು. ಈ ವಿಡಿಯೊ, ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾಗರೋಪಾದಿಯಲ್ಲಿ ಅಭಿಮಾನಿಗಳು ನಗರದ ಹೃದಯಭಾಗದತ್ತ ನುಗ್ಗಲು ಇದು ಪ್ರಮುಖ ಕಾರಣವಾಯಿತು.
ವಿಧಾನಸೌಧದ ಎದುರು ಆರ್‌ಸಿಬಿ ತಂಡವನ್ನು ಸನ್ಮಾನಿಸಿದರೆ ಸರ್ಕಾರದ ವರ್ಚಸ್ಸು ಹೆಚ್ಚಾಗುತ್ತದೆ ಎಂದು ಕೆಲವರು ನೀಡಿದ ಸಲಹೆ ಪಾಲಿಸಲು ಮುಂದಾದ ಆಡಳಿತಾರೂಢರು ತರಾತುರಿಯಲ್ಲಿ ಎಲ್ಲದಕ್ಕೂ ಅನುಮತಿ ಕೊಡಿಸಿದರು. ಕೆಲವೇ ಗಂಟೆಗಳಲ್ಲಿ ವೇದಿಕೆ ನಿರ್ಮಾಣಗೊಂಡು ಎಲ್ಲವೂ ಸಜ್ಜಾಯಿತು. ಮೆಟ್ಟಿಲುಗಳ ಮೇಲೆ ಹಾಕಲಾದ ವೇದಿಕೆಯಲ್ಲಿ 25-30 ಅತಿಥಿಗಳಿಗೆ ಮಾತ್ರ ಅನುಮತಿಸಬಹುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ವಿಧಾನಸೌಧ ಭದ್ರತಾ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್‌ಗೆ ಅಭಿಪ್ರಾಯ ನೀಡಿದ್ದರು. ಆದರೆ ವೇದಿಕೆ ಮೇಲೆ ಸುಮಾರು 200ಕ್ಕೂ ಅಧಿಕ ಜನರು ಜಮಾವಣೆಯಾಗಿದ್ದರು. ಆರ್‌ಸಿಬಿ ತಂಡದ ಸದಸ್ಯರು ಸನ್ಮಾನಕ್ಕೆ ಬಂದು ಇಳಿದ ತಕ್ಷಣ ಮತ್ತು ಕಾರ್ಯಕ್ರಮ ನಡೆಯುವ ಹೊತ್ತಿನಲ್ಲಿಯೂ ಸಹ ಅವರ ಜೊತೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿದ ಸಚಿವರು, ಶಾಸಕರು, ಅವರ ಕುಟುಂಬಸ್ಥರು, ಮಕ್ಕಳು ಸೇರಿ ನೂರಾರು ಜನರು ವೇದಿಕೆಯ ಮೇಲೆಯೇ ಜಮಾವಣೆಯಾಗಿದ್ದರು.
ಅಂದಹಾಗೆ ಗುಜರಾತ್ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಮ್ಯಾಚ್ ಆಡಿ ಗೆದ್ದಿದ್ದ ಆರ್‌ಸಿಬಿ ತಂಡದ ಆಟಗಾರರು ಬುಧವಾರ ಬೆಂಗಳೂರಿಗೆ ಐಪಿಎಲ್ ಕಪ್ ಸಮೇತ ಬಂದಿದ್ದರು. ಹೀಗಿದ್ದಾಗ ಲಕ್ಷ ಲಕ್ಷ ಅಭಿಮಾನಿಗಳು ಒಂದೇ ಬಾರಿಗೆ ಜಮಾವಣೆಯಾಗುವ ಮತ್ತು ಒಳಗೆ ನುಗ್ಗುವ ಪ್ರಯತ್ನ ಮಾಡಿದ ಕಾರಣ, ವಿಧಾನಸೌಧದ ಮುಂದೆ ಹೈಕೋರ್ಟ್ ಪ್ರಾಂಗಣದಲ್ಲಿ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದರೆ ಘೋರ ದುರಂತವೇ ನಡೆದು ಹೋಗಬಹುದೆಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ ಪರಿಸ್ಥಿತಿ ಭಿನ್ನವಾಗಿ ನಿರೀಕ್ಷೆಗೂ ಮೀರಿ ಜನ ಜಮಾವಣೆಯಾಗಿ ವಿಧಾನಸೌಧದ ಎದುರು 50 ಅಡಿ ಮರಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಹತ್ತಿ ಕುಳಿತುಕೊಳ್ಳುವ ಮಟ್ಟ ತಲುಪಿತು. ಈ ಬೆಂಗಳೂರು ಅಭಿಮಾನಿಯ ವಿಡಿಯೋ ಕೂಡ ವೈರಲ್ ಆಗಿತ್ತು.
ಆಯೋಜಕರಿಗಾಗಲಿ, ಭದ್ರತಾ ವ್ಯವಸ್ಥೆ ನೋಡಿಕೊಳ್ಳುವ ಅಧಿಕಾರಿಗಳಿಗಾಗಲಿ ಲಕ್ಷಾಂತರ ಜನ ಸೇರುವ ಬಗ್ಗೆ ಒಂದಿಷ್ಟೂ ಮುನ್ನೆಚ್ಚರಿಕೆ ಊಹೆ ಇಲ್ಲದ ಕಾರಣ ಮತ್ತು ವಿಧಾನಸೌಧದ ಎದುರು ನಡೆಯಲಿರುವ ಕಾರ್ಯಕ್ರಮಕ್ಕೆ ಹೋಗಿಯೇ ತೀರಬೇಕೆಂದು ಹಟಕ್ಕೆ ಬಿದ್ದ ಅಭಿಮಾನಿಗಳ ಉನ್ಮಾದ, ಇದರಿಂದ ಬಸ್ಸು, ಸ್ವಂತ ವಾಹನ, ದ್ವಿಚಕ್ರ, ಲಾರಿ ಹಿಡಿದು ದೌಡಾಯಿಸಿದ್ದರಿಂದ ಮೆಟ್ರೊ ರೈಲಂತೂ ಜನಸಾಗರವನ್ನೇ ತುಂಬಿಕೊಂಡು ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಜನ ಸುನಾಮಿಯನ್ನೇ ಚಿಮ್ಮಿಸಿತು. ಸರಾಸರಿ 5 ನಿಮಿಷಕ್ಕೆ ಒಂದು ಬಾರಿ ಚಲಿಸುವ ಮೆಟ್ರೊ ಅಂದು, ಎರಡು ನಿಮಿಷಕ್ಕೆ ಒಂದರಂತೆ ಸಂಚರಿಸಿ ಜನರನ್ನು ಹೊತ್ತು ತಂದಿತು. ಇದರಿಂದಾಗಿ, ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಯಿತು. ಜನದಟ್ಟಣೆಯನ್ನು ತಡೆಯಲು ಕೊನೆಗೆ ವಿಧಾನಸೌಧ, ಕಬ್ಬನ್‌ಪಾರ್ಕ್ ನಿಲ್ದಾಣಗಳಲ್ಲಿ ಮೆಟ್ರೋ ರೈಲು ನಿಲ್ಲಿಸುವುದಕ್ಕೆ ತಡೆ ನಿರ್ಬಂಧ ಹೇರಲಾಯಿತು. ಆದರೂ ಸಾವಿರಾರು ಜನ ಜಮಾವಣೆಯಾಗಿದ್ದರು.
ಅತ್ತ ಆರ್‌ಸಿಬಿ ತಂಡ ಜಯಗಳಿಸುತ್ತಿದ್ದಂತೆಯೇ ರಾಜ್ಯದಲ್ಲೂ ಸಂಭ್ರಮಾಚರಣೆಗಳು ರಾತ್ರಿಯಿಡೀ ನಡೆದಿದ್ದವು. ರಾತ್ರಿಯಿಡೀ ಬಂದೋಬಸ್ತ್ ನಡೆಸಿದ್ದ ಪೊಲೀಸರು ಬೆಳಗಿನ ಜಾವದ ಸುಮಾರಿಗೆ ಮನೆಗೆ ಹೋಗಿ ನಿದ್ರೆಗೆ ಜಾರಿದ್ದರು. ಅದೇ ಹೊತ್ತಿನೊಳಗೆ, ಅದೇ ದಿನ ವಿಜಯೋತ್ಸವ ಆಚರಿಸಬೇಕೆಂಬ ತೀರ್ಮಾನವೂ ಹೊರಬಿದ್ದು ಭದ್ರತಾ ಸಿಬ್ಬಂದಿಯನ್ನು ನೇಮಿಸುವಲ್ಲಿ ಗಡಿಬಿಡಿ ಮತ್ತು ಅಡಚಣೆಯಿಂದಾಗಿ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲು ಭದ್ರತಾ ಸಿಬ್ಬಂದಿ ಕೊರತೆಯೂ ಎದ್ದು ಕಾಣುತ್ತಿತ್ತು. ಇದು ಸಂಪೂರ್ಣವಾಗಿ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿತ್ತು. ಇದನ್ನು ಮುಂದಾಲೋಚಿಸದೆ ಮುಂಜಾಗ್ರತೆ ಕ್ರಮವನ್ನು ತೆಗೆದುಕೊಳ್ಳದೇ ಇರುವುದು ಸಂಪೂರ್ಣವಾಗಿ ಸರ್ಕಾರದ ಯಂತ್ರಾಂಗ ವಿಫಲವಾಗಿ ಮಾಧ್ಯಮ ಬಾತ್ಮಿದಾರರ ಪ್ರಶ್ನೆಗಳಿಗೆ ಉತ್ತರ ಕೊಡುವಲ್ಲಿ ಸರ್ಕಾರ ಮುಜುಗರ ಮತ್ತು ಇರಿಸುಮುರಿಸು ಪಡುವಂತಾಯಿತು.
ಇಂತಹ ಸಮಯದಲ್ಲೇ ಕನ್ನಡಿಗರ ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ, ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದ ಒಳಗೆ ನುಗ್ಗಲು ಪ್ರಯತ್ನಿಸಿ ಹಲವಾರು ಗೇಟುಗಳಲ್ಲಿ ಸಾಗರದಂತೆ ಮುನ್ನುಗ್ಗುತ್ತಿರುವ ಜನಸಮೂಹವು ಒಬ್ಬರ ಮೇಲೆ ಒಬ್ಬರು ಬೀಳುತ್ತ ಒಳಗೆ ನುಗ್ಗಲು ಪ್ರಯತ್ನಿಸಿ ಭದ್ರತಾ ಸಿಬ್ಬಂದಿ ಲಾಠಿ ಚಾರ್ಜ್ ಮಾಡುವ ಮಟ್ಟಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಗೇಟುಗಳು ಮುರಿದುಬಿದ್ದು ಕಾಲ್ತುಳಿತವಾಗಿ 11 ಜನ ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡು ಸಾವನ್ನಪ್ಪಿದ್ದರು.
18 ವರ್ಷದ ಬಳಿಕ ಕಪ್ ಗೆದ್ದು ‘ನಮ್ದು’ ಎಂದು ಬೀಗಿದ ಆರ್‌ಸಿಬಿ ತಂಡಕ್ಕೆ ಜೂನ್ ೪ ರಂದು ವಿಧಾನಸೌಧದ ಎದುರು ನಡೆದ ಸನ್ಮಾನ, ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಹಮ್ಮಿಕೊಂಡ ಸಂಭ್ರಮಾಚರಣೆ ಜನಸಾಗರದ ಕಾಲ್ತುಳಿತಕ್ಕೆ ದಾರಿ ಮಾಡಿಕೊಟ್ಟು, ಸಾವಿನ ಮನೆಯ ಬಾಗಿಲನ್ನು ತೆರೆಯಿತು. ಅನಾಹುತಕ್ಕೆ ಯಾರು ಹೊಣೆ ಎಂದು ಹುಡುಕುತ್ತಾ ಹೊರಟರೆ ಸಾವಿನ ಮನೆಗೆ ಅಭಿಮಾನಿಗಳನ್ನು ದೂಡಿದವರು ಯಾರೆಂಬ ಹಲವು ಎಳೆಗಳು ಬಿಚ್ಚಿಕೊಳ್ಳುತ್ತಾ ಕೊನೆಗೆ ನ್ಯಾಯಾಂಗ ತನಿಖೆಗೆ ಸರ್ಕಾರವು ನಿರ್ಧರಿಸಿತು.
ಅಭಿಮಾನಿಗಳಲ್ಲಿ ಭುಗಿಲೆದ್ದ ಜಯದ ಉನ್ಮಾದ, ವಿವೇಚನಾರಹಿತ ತೀರ್ಮಾನ, ಹೆಜ್ಜೆ ಹೆಜ್ಜೆಗೂ ನಡೆದ ಪ್ರಮಾದ, ಅಸಹಾಯಕರಾಗಿ ನಿಲ್ಲಬೇಕಾದ ಪೊಲೀಸರ ಸ್ಥಿತಿ… ಇವೆಲ್ಲವೂ ಸೇರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯದ ಸಂತೋಷವು ನಾಡಿನ ಚರಿತ್ರೆಯ ಸಂಭ್ರಮದ ದಿನವೊಂದು ಕರಾಳ ನೆನಪಾಗಿ ಉಳಿಯುವಂತಹ ಘೋರ ದುರಂತವಾಗಿ ಮಾರ್ಪಟ್ಟಿತು.

Leave a Reply

Your email address will not be published. Required fields are marked *

Back To Top