ಈ ವರ್ಷದ ಜೂನ್-ಜುಲೈ ರಣಭೀಕರ ಮುಂಗಾರು ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ರಾಜ್ಯದ ಎಲ್ಲಾ ನದಿಗಳು ತುಂಬಿಹರಿಯುತ್ತಿದ್ದು, ಬಹುತೇಕ ಎಲ್ಲಾ ಅಣೆಕಟ್ಟುಗಳು ತುಂಬಿ ಅಣೆಕಟ್ಟುಗಳಿಂದ ನದಿ ಪಾತ್ರಕ್ಕೆ ನೀರು ಬಿಡುವ ಪರಿಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ನದಿಗಳು ಉಕ್ಕಿ ಹರಿದಿದ್ದು ಜನಸಂಚಾರಕ್ಕೆ ತೊಂದರೆಯಾಗಿದೆ. ನದಿ ಪಾತ್ರಗಳಲ್ಲಿ ವಾಸಿಸುತ್ತಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಮಲೆನಾಡಲ್ಲಿ ಭೂಕುಸಿತ ಸಂಭವಿಸುತ್ತಿದೆ. ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ.
ಜುಲೈ 18ರ ನಂತರ ಮುಂಗಾರು ಮಳೆ ಚುರುಕಾಗಿದೆ. ರಾಜ್ಯದ ಹಲವಾರು ಕಡೆಗಳಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಹಲವಾರು ಕಡೆ ಸತತ ರ್ಮೂನಾಲ್ಕು ದಿನಗಳಿಂದ ಮಳೆ ಬೀಳುತ್ತಿರುವುದರಿಂದ ಅಲ್ಲಿನ ಕೆರೆಗಳು, ಹಳ್ಳಕೊಳ್ಳಗಳು ತುಂಬಿವೆ. ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಹೊಂದಿಕೊಂಡಿರುವ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಜಿಲ್ಲೆಗಳಲ್ಲಿನ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಏರ್ಪಟ್ಟಿದೆ. ಕೇವಲ ನಾಲ್ಕು ದಿನಗಳ ಹಿಂದೆ ಇಂಥ ಚಿತ್ರಣವಿರಲಿಲ್ಲ. ಮಳೆ ಕೈಕೊಟ್ಟಿದ್ದರಿಂದಾಗಿ ಅಲ್ಲಿ ಬರದ ಛಾಯೆ ಇತ್ತು. ಆದರೆ, ಅದೀಗ ಮೂರೇ ದಿನಗಳಲ್ಲಿ ಮಾಯವಾಗಿದೆ. ಚಿಕ್ಕೋಡಿಯಲ್ಲಿ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ ನದಿಗಳು ಅಬ್ಬರಿಸುತ್ತಿದೆ. ಕರ್ನಾಟಕದ ಗಡಿಯೊಳಗೆ ಕೃಷ್ಣ, ದೂದಗಂಗ, ಮಲಪ್ರಭ, ಘಟಪ್ರಭ ನದಿಗಳು ತುಂಬಿ ಹರಿಯುತ್ತಿದೆ.
ಕರ್ನಾಟಕದ ಕೃಷ್ಣ ನದಿಯಲ್ಲಿ ಹೆಚ್ಚಿದ ಪ್ರವಾಹದಿಂದ ಆಲಮಟ್ಟಿ ಜಲಾಶಯದ ಒಳಹರಿವು ಅಪಾರವಾಗಿ ಹೆಚ್ಚಿದೆ. ಕುಡಿವ ನೀರಿನ ಉದ್ದೇಶಕ್ಕಾಗಿ ಜುಲೈ 18 ರಂದು ಶುಕ್ರವಾರ ಆಲಮಟ್ಟಿ ಜಲಾಶಯದಿಂದ ನದಿ ಪಾತ್ರಕ್ಕೆ ನೀರು ಹರಿಸಲು ಆರಂಭಿಸಲಾಗಿದೆ. ಕುಡಿವ ನೀರಿನ ಉದ್ದೇಶಕ್ಕಾಗಿ ನಾನಾ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಕೆಪಿಸಿಎಲ್ ಮೂಲಕ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ.
ಇನ್ನೂ ಹಾಸನನಗರ ಮತ್ತು ಜಿಲ್ಲಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ನದಿ, ಹಳ್ಳ ಕೊಳ್ಳ ಉಕ್ಕಿ ಹರಿಯುತ್ತಿವೆ. ಸಕಲೇಶಪುರ ತಾಲೂಕಿನ, ದೋನಹಳ್ಳೀಯ ಬೆಣಗಿನಹಳ್ಳ ಉಕ್ಕಿ ಹರಿದು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. 2018ರಲ್ಲಿ ಭಾರೀ ಮಳೆಗೆ ಕಿರು ಸೇತುವೆ ಕೊಚ್ಚಿಹೋಗಿತ್ತು. ಏಳು ವರ್ಷ ಆದರೂ ಹೊಸ ಸೇತುವೆ ನಿರ್ಮಾಣ ಮಾಡದೆ ನಿರ್ಲಕ್ಷ್ಯ ವಹಿಸಿದ್ದು ಮಳೆ ಹೆಚ್ಚಾದ ಹಿನ್ನೆಲೆ ಬೆಣಗಿನಹಳ್ಳ ಉಕ್ಕಿ ಹರಿಯುತ್ತಿದೆ. ಹಳ್ಳದ ಮತ್ತೊಂದು ಬದಿಯಲ್ಲಿರುವ ಜಮೀನುಗಳಿಗೆ ತೆರಳಲಾಗದೆ ರೈತರು ಪರದಾಡುತ್ತಿದ್ದಾರೆ. ಗ್ರಾ.ಪಂ. ಕಚೇರಿ, ಆಸ್ಪತ್ರೆ, ಮಾರುಕಟ್ಟೆಗೆ ಹತ್ತಾರು ಕಿಮೀ ಸುತ್ತಾಡ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಸೇತುವೆ ನಿರ್ಮಿಸಿ ಕೊಡದ ಅಧಿಕಾರಿಗಳು, ಜನ ಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಕಾವೇರಿ ಉಗಮಸ್ಥಾನ ಕೊಡಗಿನ ಪ್ರದೇಶದಲ್ಲಿ ಜೂನ್ ತಿಂಗಳಲ್ಲಿ ಸುರಿದ ಧಾರಾಕಾರ ಮುಂಗಾರು ಮಳೆಯಿಂದಾಗಿ ಜೂನ್ 30ಕ್ಕೆ ಮುಂಚೆಯೇ ಕನ್ನಂಬಾಡಿಯ ಕಾವೇರಿ ಕಟ್ಟೆ ಕೃಷ್ಣರಾಜ ಜಲಸಾಗರವು ತುಂಬಿ ತುಳುಕಿ ಉಕ್ಕಿ ಹರಿದು ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನವರೆಗೆ ಮೈದುಂಬಿ ಕಾವೇರಿಯಲ್ಲಿ ಪ್ರವಹಿಸಿದೆ. ಈ ವರ್ಷದ ಈ ಮಳೆ ರೈತರ ಮೊಗದಲ್ಲಿ ಹರ್ಷ ತಂದಿದೆ. ಮುಂಗಾರು ಮಳೆಗೆ ಕರ್ನಾಟಕದ ಜೀವನದಿ ಕಾವೇರಿ ತುಂಬಿ ಹರಿಯುತ್ತಿದ್ದು ಭರ್ಜರಿಯಾಗಿ ಅವಧಿಗೂ ಮುನ್ನವೇ ಕೆಆರ್‌ಎಸ್ ತುಂಬಿದೆ. ಈ ಹಿನ್ನೆಲೆಯಲ್ಲಿ ತುಂಬಿದ ಕಾವೇರಿ ನದಿಗೆ ಮುಖ್ಯಮಂತ್ರಿಯವರು ಸಿಎಂ ಸಿದ್ಧರಾಮಯ್ಯ ಅವರು ಸಂತೋಷ ಮತ್ತು ಸಂಭ್ರಮದಿಂದ ಬಾಗಿನ ಅರ್ಪಿಸಿದ್ದಾರೆ. ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಚಲುವರಾಯಸ್ವಾಮಿಯವರು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದಾರೆ. ಇದೊಂದು ವಿಶೇಷವಾದ ಸಮಾರಂಭ ಮತ್ತು ಅಣೆಕಟ್ಟು ಕಟ್ಟಿ 93 ವರ್ಷಗಳಲ್ಲಿ 76 ಬಾರಿ ಭರ್ತಿಯಾದ ಕೆಆರ್‌ಎಸ್ ಅಣೆಕಟ್ಟು ಜೂನ್ ತಿಂಗಳಲ್ಲೇ ತುಂಬಿದ್ದರಿಂದ ವಿಶೇಷವಾದ ಪೂಜೆಯನ್ನು ಕೂಡಾ ಸಲ್ಲಿಸಿದ್ದಾರೆ.
ಈಗಾಗಲೇ ಮುಂಚಿತವಾಗಿ ಉತ್ತಮ ಮುಂಗಾರು ಪೂರ್ವ ಮಳೆ ಮತ್ತು ನೈಋತ್ಯ ಮಾನ್ಸೂನ್ ಆರಂಭದೊಂದಿಗೆ ಕಬಿನಿ ಅಣೆಕಟ್ಟು ಮೇ ಅಂತ್ಯದ ವೇಳೆಗಾಗಲೆ ತುಂಬಿತ್ತು. ಆದರೆ ಜಲಾಶಯದಿಂದ ಆಗಾಗ ನೀರು ಬಿಡುಗಡೆಯಿಂದಾಗಿ ನೀರಿನ ಮಟ್ಟವು ಅದರ ಪೂರ್ಣ ಸಾಮರ್ಥ್ಯವಾದ 2284 ಅಡಿಗಳನ್ನು ಜುಲೈ 19 ರಂದು ತಲುಪಿತ್ತು. ಈ ಪ್ರಯುಕ್ತ ಭಾನುವಾರ ಜುಲೈ 20ರಂದು ಬೆಳಿಗ್ಗೆ 11.17ಕ್ಕೆ ಸಲ್ಲುವ ಶುಭ ‘ಕನ್ಯಾ ಲಗ್ನ’ದ ಸಮಯದಲ್ಲಿ ಕೃತಜ್ಞತಾ ಸೂಚಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಅಣೆಕಟ್ಟಿನಲ್ಲಿ ಕಪಿಲಾ ನದಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ.
ಕಪಿಲಾ ನದಿಯೂ ನಮ್ಮ ಜೀವನಾಡಿಯಾಗಿದ್ದು “ಕಬಿನಿ ಅಣೆಕಟ್ಟಿನ ಪುನರುದ್ಧೀಕರಣಕ್ಕಾಗಿ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ (DRIP) ಅಡಿಯಲ್ಲಿ 88 ಕೋಟಿ ರೂ.ಗಳ ಕೆಲಸವನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ, ಅಣೆಕಟ್ಟಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಇನ್ನೂ ಹೆಚ್ಚುವರಿ ಬಂದೋಬಸ್ತಿಗಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಅಂತರ-ರಾಜ್ಯ ನೀರಿನ ವಿವಾದಕ್ಕೆ ಅವಕಾಶ ನೀಡದೆ ತಮಿಳುನಾಡಿಗೆ ನಮ್ಮ ಪಾಲಿನ ನೀರನ್ನು ಬಿಡುಗಡೆ ಮಾಡಲು ನಮಗೆ ಈ ಅಣೆಕಟ್ಟಿನಿಂದ ಶೇಖರಿಸಿ ಬಿಡುಗಡೆ ಮಾಡಲು ಕಪಿಲೆ ಅಣೆಕಟ್ಟಿನ ನೀರು ಸಹಾಯ ಮಾಡಿದೆ. 2022 ಮತ್ತು 2023ರಲ್ಲಿ ಸಾಕಷ್ಟು ಮಳೆ ಇಲ್ಲದಿದ್ದಾಗ ಹೊರತುಪಡಿಸಿ, ಅಣೆಕಟ್ಟು ಯಾವಾಗಲೂ ತುಂಬಿರುತ್ತದೆ” ಎಂದು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ರವರು ನೆರೆದಿದ್ದ ಪತ್ರಕರ್ತರಿಗೆ ತಿಳಿಸಿದ್ದಾರೆ.


