ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಕಾವೇರಿ ಉಗಮಸ್ಥಾನ ಕೊಡಗಿನ ಪ್ರದೇಶದಲ್ಲಿ ಜೂನ್ ತಿಂಗಳಲ್ಲಿ ಸುರಿದ ಧಾರಾಕಾರ ಮುಂಗಾರು ಮಳೆಯಿಂದಾಗಿ ಜೂನ್ 30 ಕ್ಕೆ ಮುಂಚೆಯೇ ಕನ್ನಂಬಾಡಿಯ ಕಾವೇರಿ ಕಟ್ಟೆ ಕೃಷ್ಣರಾಜ ಜಲಸಾಗರವು ತುಂಬಿ ತುಳುಕಿ ಉಕ್ಕಿ ಹರಿದು ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನಂತ ಮೈದುಂಬಿ ಪ್ರವಹಿಸುತ್ತಿದೆ. ವರ್ಷದ ಮಳೆ ರೈತರ ಮೊಗದಲ್ಲಿ ಹರ್ಷ ತಂದಿದೆ. ಮುಂಗಾರು ಮಳೆಗೆ ಕರ್ನಾಟಕದ ಜೀವನದಿ ಕಾವೇರಿ ತುಂಬಿ ಹರಿಯುತ್ತಿದೆ. ಭರ್ಜರಿ ಮಳೆಗೆ ಅವಧಿಗೂ ಮುನ್ನವೇ ಕೆಆರ್‌ಎಸ್ ತುಂಬಿದ್ದು, ಈ ಹಿನ್ನೆಲೆ ತುಂಬಿದ ಕಾವೇರಿ ನದಿಗೆ ಸಿಎಂ ಸಿದ್ಧರಾಮಯ್ಯ ಅವರು ತುಂಬು ಮನಸ್ಸಿನಲ್ಲಿ ಬಾಗಿನ ಅರ್ಪಿಸಿದ್ದಾರೆ. ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಚಲುವರಾಯಸ್ವಾಮಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದಾರೆ. ಇದೊಂದು ವಿಶೇಷವಾದ ಮತ್ತು ಅಣೆಕಟ್ಟು ಕಟ್ಟಿ 93 ವರ್ಷಗಳಲ್ಲಿ 76 ಬಾರಿ ಭರ್ತಿಯಾದ ಕೆಆರ್‌ಎಸ್ ಅಣೆಕಟ್ಟಿನಲ್ಲಿ ವಿಶೇಷವಾದ ಪೂಜೆ ಸಲ್ಲಿಸಿದ್ದಾರೆ.
ಹಿಮಾಲಯದಲ್ಲಿ ಹುಟ್ಟುವ ಗಂಗಾ ನದಿಯಷ್ಟೇ ನಮ್ಮ ರಾಜ್ಯದಲ್ಲಿ ಹುಟ್ಟುವ ಕಾವೇರಿ ನದಿ ಪವಿತ್ರವಾದುದು. ಹುಟ್ಟು ಸಾವು, ಪ್ರಕೃತಿ, ಭೂಮಿ ಯಾವುದು ನಮ್ಮ ಕೈಯಲ್ಲಿ ಇಲ್ಲ. ಎಲ್ಲವೂ ಭಗವಂತನ ಕೈಯಲ್ಲಿದೆ. ಇನ್ನೊಬ್ಬರ ಜೀವನದಲ್ಲಿ ಎಷ್ಟು ಬದಲಾವಣೆ ತರುತ್ತೇವೆ, ಸಂತೋಷ ಉಂಟು ಮಾಡುತ್ತೇವೆ ಎನ್ನುವುದರಲ್ಲಿ ನಮ್ಮ ಬದುಕಿನ ಸಾರ್ಥಕತೆ ಅಡಗಿದೆ ಎಂದು ಮತ್ತು ನಮ್ಮ ಸರ್ಕಾರವು ಆಡಳಿತಕ್ಕೆ ಬಂದು ಎರಡು ವರ್ಷದಲ್ಲಿ ಹಲವಾರು ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದ್ದು ಮುಖ್ಯವಾಗಿ ಈ ಆರ್ಥಿಕ ವರ್ಷದ ಆಯವ್ಯಯದಲ್ಲಿ ರೂ.೨೫ ಸಾವಿರ ಕೋಟಿ ಅನುದಾನವನ್ನು ಪ್ರತ್ಯೇಕವಾಗಿ ಎಲ್ಲಾ ನೀರಾವರಿ ಯೋಜನೆಗಳಿಗೆ ಹಂಚಿಕೆ ಮಾಡಲಾಗುತ್ತದೆಂದು ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಮತ್ತು ಉಪ ಮುಖ್ಯಮಂತ್ರಿಯವರು ಹೇಳಿದ್ದಾರೆ.
ಇದಲ್ಲದೆ ರೈತರ ಅಭಿವೃದ್ಧಿಗಾಗಿ ಮತ್ತು ಕೃಷಿ ಪ್ರಗತಿಗಾಗಿ ಈಗಾಗಲೇ ಹಾಲಿ ಇರುವ ಮೂರುವರೆ ಲಕ್ಷ ಪಂಪ್‌ಸೆಟ್‌ಗಳಿಗೆ ರೂ.19 ಸಾವಿರ ಕೋಟಿ ಸರ್ಕಾರವೇ ಉಚಿತ ವಿದ್ಯುತ್ ನೀಡುತ್ತಿದೆ. ಇವೆಲ್ಲವನ್ನೂ ಸರ್ಕಾರವು ಜನರ ಒಳಿತಿಗಾಗಿ ರೈತರ ಆರ್ಥಿಕ ಅಭಿವೃದ್ಧಿಗಾಗಿ ವೆಚ್ಚ ಮಾಡುತ್ತಿದೆ ಎಂದು ಈ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ.
‘ನೀರಿಗೆ ಜಾತಿ, ಧರ್ಮವಿಲ್ಲ. ನೀರನ್ನು ಪೂಜಿಸುವುದು ನಮ್ಮ ಸಂಸ್ಕೃತಿ. ಕಾವೇರಿ ಆರತಿಯಿಂದ ಸ್ಥಳೀಯರಿಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ’ ಎಂದು ಹೇಳಿದರು. ಬೃಂದಾವನ ಉದ್ಯಾನವನವನ್ನು ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದ ಅವರು, ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಸನ್ನದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಸಮಾರಂಭದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಬೋಸರಾಜ್, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ರವಿ ಗಣಿಗ, ಉದಯ್, ಹರೀಶ್ ಗೌಡ, ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ಎಂಎಲ್ಸಿಗಳಾದ ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ತಮ್ಮಯ್ಯ ಮತ್ತಿತರು ಭಾಗವಹಿಸಿದ್ದರು.



