ಲಿವರ್ ಅಥವಾ ಯಕೃತ್ತಿನ ಕ್ಯಾನ್ಸರ್ ಜಾಗತಿಕವಾಗಿ ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಚಿಕಿತ್ಸೆಯ ಫಲಿತಾಂಶ ಉತ್ತಮಗೊಳ್ಳುವುದರಲ್ಲಿ ಶೀಘ್ರ ಪತ್ತೆ ಬಹಳ ನಿರ್ಣಾಯಕವಾಗಿದೆ. ಯಕೃತ್ ಕ್ಯಾನ್ಸರ್ ಅದರಲ್ಲೂ ಹೆಚ್ಚು ಸಾಮಾನ್ಯವಾಗಿರುವ ವಿಧವಾದ ಹೆಪಟೊಸೆಲ್ಯುಲಾರ್ ಕಾರ್ಸಿನೋಮಾ (ಎಚ್‌ಸಿಸಿ)ವನ್ನು ಬೇಗನೆ ಪತ್ತೆ ಮಾಡಿದರೆ ರೋಗಿ ಬದುಕುಳಿಯುವ ಸಾಧ್ಯತೆಗಳು ಹೆಚ್ಚುತ್ತವೆ. ದುರದೃಷ್ಟವಶಾತ್ ಯಕೃತ್ ಕ್ಯಾನ್ಸರ್ ತನ್ನ ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ; ಲಕ್ಷಣಗಳು ಪ್ರಕಟಗೊಳ್ಳುವ ವೇಳೆಗೆ ರೋಗ ಬಹಳ ಮುಂದುವರಿದ ಹಂತವನ್ನು ತಲುಪಿ ಚಿಕಿತ್ಸೆಯ ಆಯ್ಕೆಗಳು ತೀರಾ ಸೀಮಿತವಾಗಿರುತ್ತವೆ. ಹೀಗಾಗಿಯೇ ಯಕೃತ್ ಕ್ಯಾನ್ಸರ್ ಉಂಟಾಗುವ ಅಪಾಯ ಹೊಂದಿರುವ ಜನರಿಗೆ ನಿಯಮಿತವಾದ ತಪಾಸಣೆ ಮತ್ತು ಶೀಘ್ರ ಪತ್ತೆ ಅತ್ಯಂತ ಮುಖ್ಯವಾಗಿದೆ.
ಯಕೃತ್ ಕ್ಯಾನ್ಸರ್ ಲಕ್ಷಣಗಳು ಪ್ರಕಟಗೊಳ್ಳುವುದಕ್ಕೆ ಮುನ್ನವೇ ಅದನ್ನು ಪತ್ತೆ ಮಾಡಿ ಬೇಗನೆ ಚಿಕಿತ್ಸೆ ಒದಗಿಸುವುದಕ್ಕಾಗಿ ಯಕೃತ್ ಕ್ಯಾನ್ಸರ್ ತಪಾಸಣೆ ಅತೀ ಮುಖ್ಯವಾಗಿದೆ. ದೀರ್ಘಕಾಲೀನ ಯಕೃತ್ ಕಾಯಿಲೆಗಳಾದ ಸಿರೋಸಿಸ್, ಹೆಪಟೈಟಿಸ್ ಬಿ ಅಥವಾ ಸಿ ಸೋಂಕು ಹೊಂದಿರುವವರು, ನಾನ್ ಅಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್‌ಗೆ ತುತ್ತಾಗಿರುವವರು ಮತ್ತು ಮದ್ಯಪಾನ ಸಂಬಂಧಿ ಯಕೃತ್ ಹಾನಿಗೆ ಒಳಗಾಗಿರುವಂತಹ ಯಕೃತ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಜನರಿಗೆ ಯಕೃತ್ ಕ್ಯಾನ್ಸರ್ ತಪಾಸಣೆ ಅತ್ಯಂತ ಮುಖ್ಯವಾಗಿರುತ್ತದೆ. ಈ ಅನಾರೋಗ್ಯಗಳನ್ನು ಹೊಂದಿರುವವರು ಯಕೃತ್ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಗಳು ಅತೀ ಹೆಚ್ಚು ಇರುವುದರಿಂದ ನಿಯಮಿತವಾಗಿ ತಪಾಸಣೆಗೆ ಒಳಗಾಗುವ ಮೂಲಕ ಗಡ್ಡೆಗಳು ಇನ್ನೂ ಸಣ್ಣ ಗಾತ್ರದಲ್ಲಿದ್ದು, ಮಿತ ಪ್ರದೇಶದಲ್ಲಿ ಇರುವಾಗಲೇ ತಪಾಸಣೆಯ ಮೂಲಕ ಪತ್ತೆ ಹಚ್ಚಿ ಮರಣ ಸಾಧ್ಯತೆಯನ್ನು ಕಡಿಮೆ ಮಾಡಬಹುದಾಗಿದೆ.
ಅಪಾಯ ಹೆಚ್ಚು ಇರುವ ಜನರಿಗೆ ತಪಾಸಣೆಯನ್ನು ಅಲ್ಟ್ರಾಸೌಂಡ್‌ನಂತಹ ಚಿತ್ರಣ ತಂತ್ರಜ್ಞಾನದ ಜೊತೆಗೆ ಅಲ್ಫಾ-ಫೀಟೊಪ್ರೊಟೀನ್ (ಎಎಫ್‌ಪಿ)ಯ ಪ್ರಮಾಣವನ್ನು ಅಳೆಯುವ ರಕ್ತಪರೀಕ್ಷೆಯೊಂದಿಗೆ ನಡೆಸಲಾಗುತ್ತದೆ. ಅಲ್ಟ್ರಾಸೌಂಡ್ ಗಾಯವನ್ನು ಉಂಟು ಮಾಡದ, ಸಾಮಾನ್ಯವಾಗಿ ಎಲ್ಲೆಡೆಯೂ ಲಭ್ಯವಿರುವ ಮತ್ತು ಮಿತವ್ಯಯದ ಪರೀಕ್ಷೆಯಾಗಿದ್ದು, ಯಕೃತ್ ಕ್ಯಾನ್ಸರ್ ತಪಾಸಣೆಗೆ ಹೆಚ್ಚಾಗಿ ಉಪಯೋಗವಾಗುತ್ತದೆ.
ಯಕೃತ್ ಕ್ಯಾನ್ಯರ್ ಪತ್ತೆಗೆ ನೆರವಾಗುವ ವಿಶಿಷ್ಟ ಪ್ರತಿದೀಪಕ ಸಂವೇದಕವನ್ನು (uminescent probe) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಟರ್ಬಿಯಂ (Terbium) ಎಂಬ ಅಪರೂಪದ ಭೂ ಲೋಹವನ್ನು (rare earth metal) ಬಳಸಿಕೊಂಡು, ದೇಹದಲ್ಲಿ ಬೀಟಾ-ಗ್ಲುಕುರೊನಿಡೇಸ್ (beta-glucuronidase) ಎಂಬ ಕಿಣ್ವದ ಇರುವಿಕೆಯನ್ನು ಪತ್ತೆಹಚ್ಚುವ ಮೂಲಕ ಈ ರೋಗ ನಿರ್ಣಯಕ್ಕೆ ದಾರಿ ಮಾಡಿಕೊಡುತ್ತದೆ. ಐಐಎಸ್‌ಸಿ ಪ್ರಕಾರ, ಬೀಟಾ-ಗ್ಲುಕುರೊಸಿಡೇಸ್ ಎಂಬುದು ಸೂಕ್ಷ್ಮಜೀವಿಗಳಿಂದ ಹಿಡಿದು ಸಸ್ಯಗಳು ಮತ್ತು ಪ್ರಾಣಿಗಳವರೆಗೆ ಎಲ್ಲಾ ಜೀವರಾಶಿಗಳಲ್ಲಿ ಕಂಡುಬರುವ ಕಿಣ್ವವಾಗಿದೆ. ಗ್ಲುಕುರೊನಿಕ್ ಆಮ್ಲ ಎಂಬ ಸಕ್ಕರೆ ಆಮ್ಲವನ್ನು ಒಡೆಯುವುದು ಇದರ ಪ್ರಮುಖ ಕಾರ್ಯವಾಗಿದೆ.
“ಜೈವಿಕವಾಗಿ ಸರ್ವವ್ಯಾಪಿಯಾಗಿರುವುದರ ಜೊತೆಗೆ, ಈ ಕಿಣ್ವವು ಯಕೃತ್ ಕ್ಯಾನ್ಸರ್‌ನ ನಿರ್ಣಾಯಕ ಜೈವಿಕ ಗುರುತಾಗಿ (biomarker) ಕಾರ್ಯನಿರ್ವಹಿಸುತ್ತದೆ. ವಾಸ್ತವವಾಗಿ, ಬೀಟಾ-ಗ್ಲುಕುರೊನಿಡೇಸ್ ಪ್ರಮಾಣ ಹೆಚ್ಚಳವು ಕರುಳು, ಸ್ತನ ಮತ್ತು ಮೂತ್ರಪಿಂಡದ ಕ್ಯಾನ್ಸರ್‌ಗಳು, ಹಾಗೆಯೇ ಮೂತ್ರನಾಳದ ಸೋಂಕುಗಳು ಮತ್ತು ಏಡ್ಸ್ನೊಂದಿಗೆ ಕಂಡುಬರುತ್ತದೆ” ಎಂದು ಐಐಎಸ್‌ಸಿ ತಿಳಿಸಿದೆ.
ಈ ಕಿಣ್ವಗಳನ್ನು ಪತ್ತೆಹಚ್ಚಲು ಸಾಮಾನ್ಯವಾಗಿ ಬಳಸುವ ಬಣ್ಣಮಾಪನ (colorimetry) ಮತ್ತು ಪ್ರತಿದೀಪಕ (fluorescence) ವಿಧಾನಗಳು ಸೂಕ್ಷ್ಮತೆಯ ಕೊರತೆ ಅಥವಾ ಹಿನ್ನೆಲೆ ಸಂಕೇತಗಳಿಂದ ಅಡಚಣೆಗೊಳಗಾಗುತ್ತವೆ.
ಆದರೆ, ಅಪರೂಪದ ಭೂ ಲೋಹಗಳು ದೀರ್ಘಾವಧಿಯ ಉತ್ತೇಜಿತ ಸ್ಥಿತಿಗಳನ್ನು (long-lived excited states) ಹೊಂದಿರುವುದರಿಂದ, ಅಲ್ಪಾವಧಿಯ ಹಿನ್ನೆಲೆ ಪ್ರತಿದೀಪಕವನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇದು ಹೆಚ್ಚು ಸ್ಪಷ್ಟವಾದ ಸಂಕೇತವನ್ನು ನೀಡುತ್ತದೆ ಎಂದು ಐಐಎಸ್‌ಸಿಯ ಮಾಜಿ ಪಿಎಚ್‌ಡಿ ವಿದ್ಯಾರ್ಥಿನಿ ಹಾಗೂ ಸಂಶೋಧನಾ ಪ್ರಬಂಧದ ಸಹ-ಲೇಖಕಿ ಅನನ್ಯಾ ಬಿಸ್ವಾಸ್ ಹೇಳಿದ್ದಾರೆ. ಈ ಅಧ್ಯಯನವು ‘ಕೆಮಿಸ್ಟ್ರಿ’ ಜರ್ನಲ್‌ನಲ್ಲಿ ಪ್ರಕಟವಾಗಿದ್ದು ಯಕೃತ್ ಕ್ಯಾನ್ಸರ್‌ನ ಶೀಘ್ರ ಪತ್ತೆ ಹಚ್ಚುವಲ್ಲಿ ಎಷ್ಟು ಸಹಕಾರಿಯಾಗಲಿದೆ ಎಂಬುದನ್ನು ಮತ್ತು ಬೆಳವಣಿಗೆಯನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ.



