ಮಾಹಿತಿ ಹಕ್ಕು : ಭ್ರಷ್ಟಾಚಾರ ನಿರ್ಮೂಲನೆ ಅಸ್ತ್ರ

ಮಾಹಿತಿ ಹಕ್ಕು : ಭ್ರಷ್ಟಾಚಾರ ನಿರ್ಮೂಲನೆ ಅಸ್ತ್ರ

ಭಾರತ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಜಾರಿಗೊಳಿಸಿ ೧೨ನೇ ಅಕ್ಟೋಬರ್ 2005ರಿಂದ ಅನುಷ್ಠಾನಕ್ಕೆ ಬಂದಿದೆ. ಸಾರ್ವಜನಿಕ ಜೀವನದಲ್ಲಿ ಹೆಚ್ಚು ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗಾಗಿ ಈ ಕಾಯ್ದೆಯು ಸರ್ಕಾರದಿಂದ ಬಹುತೇಕ ಯಾವುದೇ ಮಾಹಿತಿ ಪಡೆಯುವ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ. ಈ ಕಾಯ್ದೆಯ ಹಿಂದೆ ಎರಡು ಉದ್ದೇಶಗಳಿವೆ : ಎಲ್ಲಾ ಭಾರತೀಯರಿಗೆ ಸೂಕ್ತವಾಗಿ ಸರ್ಕಾರದ ಮಾಹಿತಿ ಸಾಮಾನ್ಯ ಜನರಿಗೆ ಲಭಿಸುವಂತೆ ಮಾಡುವುದು ಹಾಗೂ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರುವುದು ಮತ್ತು ಪ್ರತಿ ಸಾರ್ವಜನಿಕ ಅಧಿಕಾರಿ ಜನರಿಗೆ ಉತ್ತರದಾಯತ್ವ ಮತ್ತು ವಿಶ್ವಾಸಾರ್ಹತೆ ಹೊಂದುವಂತೆ ಮಾಡುವುದು.
ಭಾರತೀಯ ಸಂವಿಧಾನದ ಅನ್ವಯ, ಮಾಹಿತಿ ಹಕ್ಕು ನಾಗರಿಕರ ಮೂಲಭೂತ ಹಕ್ಕಾಗಿರುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕ ಒಂದಲ್ಲ ಇನ್ನೊಂದು ರೀತಿಯಲ್ಲಿ ತೆರಿಗೆಗಳನ್ನು ಪಾವತಿಸುತ್ತಿದ್ದು, ಈ ಹಣವನ್ನು ಸರ್ಕಾರ ಹೇಗೆ ವೆಚ್ಚ ಮಾಡುತ್ತಿದೆ ಎಂಬುದನ್ನು ತಿಳಿಯುವ ಹಕ್ಕು ಪ್ರತಿ ಭಾರತೀಯ ಪ್ರಜೆಯು ಹೊಂದಿರುತ್ತಾನೆ. ಈ ಕಾಯ್ದೆಯು ಸರ್ಕಾರದ ನೀತಿಗಳು, ಪ್ರಕ್ರಿಯೆಗಳು ಮತ್ತು ನೀತಿಗಳ ಫಲಶೃತಿಗಳನ್ನು ತಿಳಿದುಕೊಳ್ಳಲು ನಾಗರಿಕನಿಗೆ ಸಂವಿಧಾನದತ್ತ ಸರ್ವ ಹಕ್ಕು ಸಹ ನೀಡುತ್ತದೆ.
ಸ್ವಾತಂತ್ರ್ಯ ಬಂದು ಅರವತ್ತು ವರ್ಷಗಳಾದರೂ ಸಹ ಸರ್ಕಾರದ ಅಧಿಕಾರಿಗಳು ತಾವಾಗಿಯೇ ಜನರಿಗೆ ಮಾಹಿತಿ ನೀಡದ ಕಾರಣ ಈ ಕಾಯ್ದೆಯ ಅಗತ್ಯತೆ ಕಂಡುಬಂದಿತು. ಭ್ರಷ್ಟಾಚಾರ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಇಲ್ಲದಿರುವಿಕೆ ಹಾಗೂ ಸರ್ಕಾರದಿಂದ ಸಾಮಾನ್ಯ ಜನರ ಅನಾದರ ಮತ್ತು ಉದಾಸೀನತೆ ಪರಿಣಾಮವಾಗಿ ಮತ್ತು ನ್ಯಾಯಾಲಯಗಳ ತೀರ್ಪಿನ ಆಧಾರದಿಂದ ಇದು ಜಾರಿಗೆ ಬಂದಿತು. ತೆರಿಗೆ ಪಾವತಿದಾರನಾದ ಸಾಮಾನ್ಯನಿಗೆ ಸರ್ಕಾರದ ಹೊಣೆಗಾರಿಕೆಯ ಮತ್ತು ಸರ್ಕಾರವು ಒದಗಿಸುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯುವ ಅಗತ್ಯವನ್ನು ಕಲ್ಪಿಸಿತು. ಮಾಹಿತಿ ಕೋರುವ ಪ್ರಕ್ರಿಯೆಯನ್ನು ಮಾಹಿತಿ ಹಕ್ಕು ಕಾಯ್ದೆ ಮೂಲಕ ಅರ್ಜಿದಾರರು ಕೋರುವ ಮಾಹಿತಿ ಪಡೆಯಲು ಆಡಳಿತಾತ್ಮಕ ಪ್ರಕ್ರಿಯೆಯ ವಿನ್ಯಾಸವನ್ನು ಈ ಕಾಯ್ದೆ ಒದಗಿಸಿದೆ.
2004-05ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯು ಮಾಹಿತಿ ಹಕ್ಕು ಕಾಯ್ದೆಯನ್ನು 2005ರಲ್ಲಿ ಸರ್ವಾನುಮತದಿಂದ ಅನುಮೋದನೆಯಾಯಿತು. ಈ ಕಾಯ್ದೆ ಅನ್ವಯ ಸಾಮಾನ್ಯ ವ್ಯಕ್ತಿ ಯಾವುದೇ ಸರ್ಕಾರಿ ಕಚೇರಿ ಅಥವಾ ಸಾರ್ವಜನಿಕ ಅಂಗಸಂಸ್ಥೆಯಿಂದ ಯಾವುದೇ ಮಾಹಿತಿ ಕೋರಬಹುದು. ಯಾವುದೇ ಅಧಿಕೃತ ದಾಖಲೆಗಳು, ದಾಖಲೆ ಪತ್ರಗಳು, ಈ ಮೇಲ್‌ಗಳು ಮತ್ತು ಪ್ರತಿಕಾ ಹೇಳಿಕೆಗಳ ಬಗ್ಗೆ ನಾಗರಿಕರು ಮಾಹಿತಿ ಪಡೆಯಬಹುದು. ಇದು ಮುದ್ರಣ ವಿಷಯ ಮತ್ತು ವಿದ್ಯುನ್ಮಾನ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಅರ್ಜಿದಾರರು ಕೋರುವ ರೀತಿಯಲ್ಲಿ ದೃಢೀಕೃತ ಪತ್ರ ಅಥವಾ ಫೋಟೋ ಪ್ರತಿಯಂತೆ ಅರ್ಜಿದಾರರಿಗೆ ಸಂಬಂಧಪಟ್ಟ ಸರ್ಕಾರಿ ಕಛೇರಿ ಮುಖ್ಯಸ್ಥರು ಮಾಹಿತಿ ಒದಗಿಸಿಸಬೇಕಿರುತ್ತದೆ.
ಸರ್ಕಾರದ ಆದಾಯ ವೆಚ್ಚಗಳು ಸಾರ್ವಜನಿಕ ಖಾಸಗಿ ಸಹಭಾಗಿತ್ವ, ವರ್ಗಾವಣೆ ನೀತಿ ಮತ್ತು ವರ್ಗಾವಣೆ/ಹುದ್ದೆ ನಿಯೋಜನೆ ಆದೇಶಗಳು, ಆರ್‌ಟಿಐ ಮನವಿ/ಅರ್ಜಿಗಳ ಸ್ವೀಕಾರ ಮತ್ತು ವಿಲೇವಾರಿ, ನಾಗರಿಕರ ಸನ್ನದು, ಮತ್ತು ವಿಚಾರ ಯೋಗ್ಯ ಮತ್ತು ವಿಚಾರ ಯೋಗ್ಯವಲ್ಲದ ವಿಷಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಸಚಿವಾಲಯಗಳು, ಇಲಾಖೆಗಳು ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳಿಗೆ ಸೂಚನೆ ನೀಡಿ ಈ ಬಗ್ಗೆ ಮಾಹಿತಿ ಅಧಿಕಾರಿಗಳನ್ನು ಪ್ರತ್ಯೇಕವಾಗಿ ನೇಮಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಜನರು ಕೇಳುವ ಮಾಹಿತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತಾನಾಗಿಯೇ ಒದಗಿಸಬೇಕಾಗುತ್ತದೆ.
ಈ ಕಾಯ್ದೆಯು ಸರ್ಕಾರದ ಚಟುವಟಿಕೆಗಳು ಮತ್ತು ನೀತಿಗಳ ಬಗ್ಗೆ ಜನರು ಗರಿಷ್ಠ ಮಾಹಿತಿ ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಜನರೊಂದಿಗೆ ಈಗ ಅಧಿಕೃತ ಮಾಹಿತಿ ಲಭ್ಯವಿರುವುದರಿಂದ ಸಾರ್ವಜನಿಕ ಅಂಗಸಂಸ್ಥೆಗಳು ಹೆಚ್ಚು ಪಾರದರ್ಶಕವಾಗಿರಲು ಮತ್ತು ಭ್ರಷ್ಟಾಚಾರ ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ಸರ್ಕಾರ ಏನು ಮಾಡುತ್ತಿದೆ ಎಂಬುದು ಜನರಿಗೆ ತಿಳಿಯದೇ ಇರುವುದರಿಂದ ಸಾರ್ವಜನಿಕ ವಿಷಯಗಳ ಸುತ್ತ ಸಾಮಾನ್ಯವಾಗಿ ಗೌಪ್ಯತೆ ಇರುವುದರಿಂದ ಭ್ರಷ್ಟಾಚಾರ ನಿಯಂತ್ರಿಸಲು ಇದು ಸಹಕಾರಿ. ಬಹುತೇಕ ಯಾವುದೇ ರೀತಿಯ ಮಾಹಿತಿಯನ್ನು ಸಾಮಾನ್ಯ ವ್ಯಕ್ತಿ ಪಡೆಯಲು ಸಾಧ್ಯವಾಗಿರುವುದರಿಂದ ಇದು ಸರ್ಕಾರದ ಕಾರ್ಯವೈಖರಿಗಳನ್ನು ಸರಿಪಡಿಸಲು ಕೆಲಸ ಮಾಡುತ್ತದೆ ಹಾಗೂ ಭ್ರಷ್ಟಾಚಾರವನ್ನು ಕಡಿಮೆ ಮಾಡಿ ಸರ್ಕಾರದ ಅಧಿಕಾರ ದುರುಪಯೋಗವನ್ನು ತಗ್ಗಿಸುತ್ತದೆ.
ಭಾರತದಾದ್ಯಂತ ಗ್ರಾಮಾಂತರ ಪ್ರದೇಶಗಲ್ಲಿ ಸರ್ಕಾರದಿಂದ ಅನುಷ್ಠಾನಗೊಳ್ಳುವು ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಯಾವುದೇ ಮಾಹಿತಿಯನ್ನು ಗ್ರಾಮೀಣ ಜನರು ಈ ಕಾಯ್ದೆ ಅನುಷ್ಠಾನ ನಂತರ ಪಡೆಯಬಹುದಾಗಿರುತ್ತದೆ. ಸರ್ಕಾರದ ಕಾರ್ಯಕ್ರಮಗಳ ಉದ್ದೇಶ ಮತ್ತು ಗುರಿ, ಲಕ್ಷ್ಯ ಇಡಲಾದ ಫಲಾನುಭವಿಗಳು ಹಾಗೂ ಅವುಗಳ ಪಟ್ಟಿಯನ್ನು ಪಾರದರ್ಶಕವಾಗಿ ಸರ್ಕಾರಗಳಿಂದ ಜನ ಸಾಮಾನ್ಯರಿಗೆ ಮಾಹಿತಿ ಒದಗಿಸುವುದು ಅಗತ್ಯವಾಗಿದ್ದು ವೈಯಕ್ತಿಕವಾಗಿ ಸುಲಭವಾಗಿ ಪಡೆಯಬಹುದಾಗುತ್ತದೆ.
ಈ ಕಾಯ್ದೆ ಅನ್ವಯ, ಪ್ರತಿ ಸರ್ಕಾರಿ ಕಚೇರಿಯು ಈಗ ಸಾರ್ವಜನಿಕ ಮಾಹಿತಿ ಅಧಿಕಾರಿಯೊಬ್ಬರನ್ನು ನೇಮಕ ಮಾಡಿರುತ್ತದೆ. ಯಾವುದೇ ನಾಗರಿಕರು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅರ್ಜಿಯೊಂದನ್ನು ಬರೆದು ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಅಧಿಕಾರಿಯ ನೇಮಕ ಮತ್ತು ಕರ್ತವ್ಯದ ಸ್ವರೂಪಗಳನ್ನು ವಿವರವಾಗಿ ವ್ಯಾಖ್ಯಾನಿಸಲಾಗಿದ್ದು, ಇದರಿಂದ ಜನರು ಅಧಿಕಾರಿಯ ಕರ್ತವ್ಯಗಳೇನು ಎಂಬುದನ್ನು ತಿಳಿಯಬಹುದಾಗಿದೆ.
ಈ ನಿಯಮದ ಪ್ರಕಾರ, ಅಧಿಕಾರಿಯಿಂದ ಪತ್ರ ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ಮಾಹಿತಿ ಒದಗಿಸಬೇಕಿರುತ್ತದೆ. ಮತ್ತು ಆ ಕಛೇರಿಯಲ್ಲಿ ಮಾಹಿತಿ ಲಭ್ಯವಿಲ್ಲದಿದ್ದರೆ ಅಥವ ಸರ್ಕಾರಿ ಕಚೇರಿಗೆ ಸಂಬಂಧಪಡದಿದ್ದರೆ ಮಾಹಿತಿ ಪಡೆಯಲು ದೀರ್ಘ ಕಾಲ ಬೇಕಾಗಬಹುದು.
ಈ ಕಾಯ್ದೆ ಅನ್ವಯ, ಸರ್ಕಾರಿ ಕಛೇರಿ ನೀಡಿದ ಮಾಹಿತಿಯಿಂದ ನಿಮಗೆ ಸಮಾಧಾನವಾಗದಿದ್ದರೆ ಆ ಬಗ್ಗೆ ಮೇಲ್ಮನವಿ ನೀಡಲು ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿರುತ್ತದೆ. ಈ ಅಧಿಕಾರಿಯು ಸಾರ್ವಜನಿಕ ಮಾಹಿತಿ ಅಧಿಕಾರಿಗಿಂತ ಮೇಲ್ಪಟ್ಟವರಾಗಿರುತ್ತಾರೆ. ಈ ಮೇಲ್ಮನವಿ ಪ್ರಾಧಿಕಾರಿ ಅಥವ ಮೇಲ್ಮನವಿ ಅಧಿಕಾರಿಯು 15 ದಿನಗಳಲ್ಲಿ ಮಾಹಿತಿ ಒದಗಿಸಬೇಕಿರುತ್ತದೆ. ಇಲ್ಲಿಯು ಮಾಹಿತಿ ಒದಗಿಸದಿದ್ದಲ್ಲಿ ಪ್ರಕರಣದಲ್ಲಿ ಆ ರಾಜ್ಯದ ಮಾಹಿತಿ ಆಯುಕ್ತರು ಮತ್ತು ಆಯೋಗಕ್ಕೆ ದೂರು ನೀಡಬೇಕಿರುತ್ತದೆ. ಪ್ರತಿ ರಾಜ್ಯ ಸರ್ಕಾರವು ರಾಜ್ಯ ಮಾಹಿತಿ ಆಯೋಗವನ್ನು ನೇಮಕ ಮಾಡಿದೆ. ಅರ್ಜಿದಾರರು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬಹುದು. ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಈ ವಿಷಯ ಇತ್ಯರ್ಥವಾಗಿದೆಯೇ ಮಾಹಿತಿ ನೀಡಿದ್ದಾರೆಯೆ ಎಂಬುದನ್ನು ಪರಾಮರ್ಶಿಸುತ್ತಾರೆ. ಕೇಂದ್ರೀಯ ಮಟ್ಟದಲ್ಲಿ ಕೇಂದ್ರೀಯ ಮಾಹಿತಿ ಆಯೋಗ ಇರುತ್ತದೆ.
ಸಾರ್ವಜನಿಕರಿಗೆ ಒದಗಿಸಲು ಸಾಧ್ಯವಾಗದೇ ಇರುವ ಕೆಲವು ಮಾಹಿತಿಗಳನ್ನು ಬಹಿರಂಗಗೊಳಿಸಿದರೆ ದೇಶದ ಭದ್ರತೆ ಮೇಲೆ ಪರಿಣಾಮ ಉಂಟು ಮಾಡಬಹುದಾದ ಮತ್ತು ಸಾರ್ವಜನಿಕರಿಗೆ ಸಂಬಂಧಪಡದ ಮಾಹಿತಿಗಳನ್ನು ಜನರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲವೆಂದು ಕಾಯ್ದೆಯಲ್ಲಿ ಇದೆ.
ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಕಾನೂನನ್ನು ರೂಪಿಸಲಾಗಿದೆ ಹೊರತು ಜನರನ್ನು ಶೋಷಣೆ ಮಾಡುವುದಕ್ಕಾಗಲಿ ಅಥವಾ ಯಾರಿಗೋ ತೊಂದರೆ ಉಂಟು ಮಾಡುವುದಕ್ಕಾಗಿ ಅಲ್ಲ. ಹೀಗಾಗಿ, ಅರ್ಜಿದಾರರು ಮತ್ತು ಸಾರ್ವಜನಿಕರಿಗೆ ಪ್ರಯೋಜನವಾಗುವಂಥ ಮಾಹಿತಿಯನ್ನು ಮಾತ್ರ ಕೇಳಬೇಕು. ನಾಗರಿಕರೊಂದಿಗೆ ಸಾರ್ವಜನಿಕ ಮಾಹಿತಿಯನ್ನು ಹಂಚಿಕೊಳ್ಳುವ ಸರ್ಕಾರದ ಜವಾಬ್ದಾರಿ ಜೊತೆಗೆ ನಾಗರಿಕರೂ ಸಹ ತಮ್ಮ ಕರ್ತವ್ಯಗಳು ಮತು ಹೊಣೆಗಾರಿಕೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ಹೆಚ್ಚು ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಈ ಕಾನೂನನ್ನು ಬಳಸಲು ರಾಜ್ಯಾಂಗವು ಮತ್ತು ಸಂವಿಧಾನವು ನಮ್ಮೆಲ್ಲರಿಗೂ ಈ ಕಾಯ್ದೆ ಅವಕಾಶ ಮಾಡಿಕೊಟ್ಟಿದೆ.
ಮಾಹಿತಿ ಹಕ್ಕು ಕಾಯ್ದೆ 2005ರ ಬಂದ ನಂತರ ಸಾಕಷ್ಟು ಬೆಳವಣಿಗೆಗೆ ಹಾಗೂ ಅಭಿವೃದ್ಧಿಯಾಗಿದ್ದು ಡಿಜಿಟಲ್ ಯುಗಕ್ಕೆ ಕಾಲಿಟ್ಟ ನಂತರ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದ್ದು, ಇದು ವಿಸ್ತೃತವಾಗಿ ಈ ಅಂತರ್‌ಜಾಲ ಕಾಲಘಟ್ಟದಲ್ಲಿ ವೈಯಕ್ತಿಕ ಮಾಹಿತಿಗಳು ಹ್ಯಾಕರ್ ಮೂಲಕ ಕಳ್ಳರ ಪಾಲಾಗುತ್ತಿದೆ. ಇದರಿಂದಾಗಿ ಸರ್ಕಾರವು ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆ (ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್), ೨೦೨೩' ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ಕೇಂದ್ರ ಸರ್ಕಾರ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ೨೦೨೩ರಲ್ಲಿ ಕಾಯ್ದೆಯೊಂದನ್ನು ಜಾರಿ ಮಾಡಿದೆ. ಆದರೆ ಮಾಹಿತಿ ಹಕ್ಕಿಗೆ ಸಂಬಂಧಿಸಿದಂತಹ ಅಂಶವೊಂದಕ್ಕೆ ಧಕ್ಕೆ ಉಂಟು ಮಾಡುವ ಆತಂಕಕಾರಿ ಆಂಶವೊಂದು ಈ ಕಾಯ್ದೆಯಲ್ಲಿ ಕಂಡುಬಂದಿದೆ. ಇದೇ ಕಾರಣಕ್ಕಾಗಿಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆ ೨೦೨೩’ ಬೀರಬಹುದಾದ ನಕಾರಾತ್ಮಕ ಪರಿಣಾಮಗಳ ಬಗ್ಗೆ ಗಂಭೀರ ಸ್ವರೂಪದ ಕಳವಳಗಳು ದೇಶದ ಎಲ್ಲೆಡೆ ವ್ಯಕ್ತವಾಗಿದೆ. ದತ್ತಾಂಶ ಸುರಕ್ಷತಾ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದ್ದು, ಹಲವಾರು ವಿಷಯಗಳ ಬಗ್ಗೆ ನಿಯಂತ್ರಣವನ್ನು ಕಾಯ್ದೆ ರೂಪದಲ್ಲಿ ಬೀಗಿಗೊಳಿಸಲಾಗಿದೆ.
ಹಲವಾರು ಆರ್‌ಟಿಐ ಕಾರ್ಯಕರ್ತರು/ಪರಿಣಿತರು ಈ ಕಾಯ್ದೆಯ ಸೆಕ್ಷನ್ ೪೪(೩), ಮಾಹಿತಿ ಹಕ್ಕು ಕಾನೂನಿನ ಸೆಕ್ಷನ್ 8(1)(ಜೆ)ಯಲ್ಲಿ ಬದಲಾವಣೆ ತರುವ ಸೂಚನೆ ಕಂಡು ಬಂದಿದೆ ಎಂದು, ಯಾವುದೇ ವೈಯಕ್ತಿಕ ಮಾಹಿತಿ'ಯನ್ನು ಬಹಿರಂಗಪಡಿಸಬೇಕಿಲ್ಲ ಎಂಬ ಅಂಶವನ್ನು ಅಡಕಗೊಂಡಿದೆ ಎಂಬ ಆತಂಕದಲ್ಲಿ ಪರಿಶೀಲಿಸಿದಾಗ ಯಾವುದೇ ಸಾರ್ವಜನಿಕ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ ಎಂಬುದು ಇದರರ್ಥ. ಮಾಹಿತಿ ಹಕ್ಕು ಕಾನೂನಿನ ಸೆಕ್ಷನ್ 8(1)(ಜೆ) ಪ್ರಕಾರ,ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ವಿವರಗಳು’ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಲ್ಲ ಮತ್ತು ಖಾಸಗಿತನದಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡುತ್ತವೆ ಎಂದಾದರೆ, ಸರ್ಕಾರಿ ಸಂಸ್ಥೆಗಳು ಅಂತಹ ಮಾಹಿತಿಯನ್ನು ಬಹಿರಂಗಪಡಿಸದೆ ಇರಬಹುದು. ಆದರೆ, ಅಂತಹ ಮಾಹಿತಿಯನ್ನು ಬಹಿರಂಗಪಡಿಸುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದೆ ಎಂದು ಮೇಲ್ಮನವಿ ಪ್ರಾಧಿಕಾರವು ಹೇಳಿದರೆ, ಆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಸೆಕ್ಷನ್ 8(1)(ಜೆ)ಗೆ ಈಗ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ಯಾವುದೇ ವಿನಾಯಿತಿಗಳು ಇಲ್ಲದೆ ಮಾಹಿತಿಯನ್ನು `ವೈಯಕ್ತಿಕ’ ಎಂದು ವರ್ಗೀಕರಿಸಿ, ಆ ಮಾಹಿತಿ ಬಹಿರಂಗಪಡಿಸುವುದನ್ನು ತಡೆಹಿಡಿಯಬಹುದು. ಈ ವಿಷಯದಲ್ಲಿ ಸರ್ಕಾರದ ಮಟ್ಟದಲ್ಲಿ ಮತ್ತು ಸಾರ್ವಜನಿಕರಲ್ಲಿ ಚರ್ಚೆ ಮುಂದುವರಿದಿದೆ.
ಭಾರತ ಸರ್ಕಾರವು ಜಾರಿಗೊಳಿಸಿರುವ ಈ ೨೦೨೩ರ ದತ್ತಾಂಶ ಸುರಕ್ಷತಾ ಕಾಯ್ದೆ ಕೂಡ ನಾಗರಿಕರ ಖಾಸಗಿತನವನ್ನು ಸ್ವಲ್ಪ ಮಟ್ಟಿಗೆ ಅಭಿವ್ಯಕ್ತಿ ಸ್ವಾತಂತ್ರö್ಯಕ್ಕೆ ಧಕ್ಕೆ ತರುವುದೆಂಬ ಅಂಶವು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಕಾಯ್ದೆಯ ಸೆಕ್ಷನ್ 17(2)(ಎ) ಪ್ರಕಾರ, ಸರ್ಕಾರದ ಏಜೆನ್ಸಿಗಳಿಗೆ ಕಾಯ್ದೆಯಿಂದ ವಿನಾಯಿತಿ ಇರುತ್ತದೆ, ಆದರೆ ಆ ಏಜೆನ್ಸಿಗಳು ನಾಗರಿಕರ ವೈಯಕ್ತಿಕ ದತ್ತಾಂಶವನ್ನು ಪಡೆಯಲು ಅವಕಾಶ ಇದ್ದು ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರö್ಯ ಮತ್ತು ನಾಗರಿಕರ ವೈಯಕ್ತಿಕ ದತ್ತಾಂಶದ ರಕ್ಷಣೆಯ ಹೊಣೆಯಿಂದ ತಪ್ಪಿಸಿಕೊಳ್ಳಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆಂಬ ಅನುಮಾನವು ಸಾರ್ವಜನಿಕರಲ್ಲಿ ಪತ್ರಿಕಾ ರಂಗದಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರತಿಧ್ವನಿಸಿ ಸಂಶಯ ಮೂಡಿದೆ. ಸರ್ಕಾರದ ಯಾವುದೇ ಪ್ರಾಧಿಕಾರವು ದತ್ತಾಂಶವನ್ನು ಬಳಕೆ ಮಾಡಿಕೊಂಡ ನಂತರದಲ್ಲಿ ಅದನ್ನು ಅಳಿಸಿಹಾಕುವ ಹೊಣೆ ಹೊರಬೇಕಿಲ್ಲ ಎಂದೂ ಕಾಯ್ದೆಯು ಹೇಳುತ್ತದೆ. ಇದರಿಂದಾಗಿ ಸರ್ಕಾರದ ಏಜೆನ್ಸಿಗಳಿಗೆ ವೈಯಕ್ತಿಕ ದತ್ತಾಂಶಗಳನ್ನು ಅನಿರ್ದಿಷ್ಟ ಅವಧಿಗೆ ಇರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇದನ್ನು ವ್ಯಕ್ತಿಗಳ ವಿರುದ್ಧ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಮತ್ತು ಆರ್‌ಟಿಐ ಕಾಯ್ದೆಯನ್ನು ಸರ್ಕಾರವು ಹಲವು ಕ್ರಮಗಳ ಮೂಲಕ ನಿಧಾನವಾಗಿ ದುರ್ಬಲಗೊಳಿಸಿತ್ತೆಂಬ ಮತ್ತು ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾವನೆಯಿದೆಯೆಂಬ ಗಾಢ ಅನುಮಾನ ಮತ್ತು ಗಾಳಿಸುದ್ದಿ ಇರುವುದರಿಂದ, ದತ್ತಾಂಶ ಸುರಕ್ಷತಾ ಕಾಯ್ದೆಯಲ್ಲಿನ ಈ ಅಂಶವನ್ನು ಸರ್ಕಾರವು ಮತ್ತೊಮ್ಮೆ ಪರಿಶೀಲಿಸಿ ಈ ಅನುಮಾನ ನಿವಾರಿಸಿ ಪರಮಾರ್ಶಿಸಲು ಕ್ರಮಕೈಗೊಳ್ಳಬೇಕು. ಅಲ್ಲದೆ, ದತ್ತಾಂಶ ಸುರಕ್ಷತಾ ಕಾಯ್ದೆಯ ಯಾವುದೇ ಅಂಶವು ಖಾಸಗಿತನದ ಹಕ್ಕಿಗೆ ಧಕ್ಕೆ ತರದಂತೆ ಭಾರತದ ಪ್ರಜೆಗಳಿಗೆ ಖಾತರಿಪಡಿಸಬೇಕು. ಇಲ್ಲದಿದ್ದರೆ ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶ ಸಂಪೂರ್ಣವಾಗಿ ಈಡೇರುವುದಿಲ್ಲ.

Leave a Reply

Your email address will not be published. Required fields are marked *

Back To Top