ಪಶ್ಚಿಮ ಘಟ್ಟಗಳ ಸಂರಕ್ಷಣೆ: ಪ್ರಗತಿ ಮುಖ್ಯವೋ ಪ್ರಕೃತಿ ಮುಖ್ಯವೋ..?

ಪಶ್ಚಿಮ ಘಟ್ಟಗಳ ಸಂರಕ್ಷಣೆ: ಪ್ರಗತಿ ಮುಖ್ಯವೋ ಪ್ರಕೃತಿ ಮುಖ್ಯವೋ..?

ಯುನೆಸ್ಕೋದ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಮುಖ್ಯವೋ ಅಥವಾ ಪರಿಸರ ಸಂರಕ್ಷಣೆಗೆ ಮುಖ್ಯವೋ ಎಂಬ ಸಂದಿಗ್ಧ ಪ್ರಶ್ನೆ ಉದ್ಭವಿಸಿದೆ. ನಾಗಾಲೋಟದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಭಿವೃದ್ಧಿ ಅಗತ್ಯಗಳಿಗೆ ಅನುಗುಣವಾಗಿ ಪರಿಸರ ಸಂರಕ್ಷಣೆ ಮತ್ತು ವಾಣಿಜ್ಯ ಅವಕಾಶಗಳ ಆರ್ಥಿಕ ಅಭಿವೃದ್ಧಿಯ ನಡುವಿನ ಸೂಕ್ಷ÷್ಮ ಸಮತೋಲನವನ್ನು ಕಾಪಾಡಿಕೊಳ್ಳಬೇಕಿದೆ. ಸುಸ್ಥಿರ ಅಭಿವೃದ್ಧಿಯ ಗುರಿಗಳೊಂದಿಗೆ ಪಶ್ಚಿಮ ಘಟ್ಟಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ. ಇದು ಸರ್ಕಾರ, ಜನಪ್ರತಿನಿಧಿಗಳು, ಪರಿಸರವಾದಿಗಳು, ಪರಿಸರ ಸಂರಕ್ಷಣಾ ಸಂಸ್ಥೆಗಳು, ಜೀವ ವಿಜ್ಞಾನಿಗಳ ಆದ್ಯ ಕರ್ತವ್ಯವೂ ಆಗಿದೆ.

ಹಿಮಾಲಯ ಪರ್ವತ ಶ್ರೇಣಿಗಿಂತ ಪ್ರಾಚೀನವಾದ ರಮ್ಯ ನಿಸರ್ಗ ಸೊಬಗಿನ ಮತ್ತು ವೈವಿಧ್ಯಮಯ ಜೀವ ವೈವಿಧ್ಯತೆಯ ಪಶ್ಚಿಮ ಘಟ್ಟಗಳು ಜಾಗತಿಕ ಪ್ರಾಮುಖ್ಯತೆಯ ಭೂದೃಶ್ಯದ ನಯನಮನೋಹರ ಮತ್ತು ರುದ್ರರಮಣೀಯ ವಿಸ್ಮಯ ತಾಣ. ಸಹ್ಯಾದ್ರಿ ಬೆಟ್ಟಗಳು ಎಂದೂ ಕರೆಯಲಾಗುವ ಪಶ್ಚಿಮ ಘಟ್ಟಗಳು ಗುಜರಾತಿನ ತಪತಿ ನದಿಯಿಂದ ತಮಿಳುನಾಡಿನ ನೀಲಗಿರಿ ಬೆಟ್ಟಗಳವರೆಗೂ ಹಬ್ಬಿಕೊಂಡಿವೆ. ಪಶ್ಚಿಮ ಘಟ್ಟ ವಿಶಾಲ ಪ್ರದೇಶವು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಒಟ್ಟು 1,600 ಕಿ.ಮೀ ವ್ಯಾಪ್ತಿಸಿಕೊಂಡಿದೆ. ಈ ಸಹ್ಯಾದ್ರಿ ಬೆಟ್ಟಗಳ ಸಾಲು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲೂ ಮಹತ್ವದ ಸ್ಥಾನ ಪಡೆದಿದೆ.

ಆಗ್ನೇಯ ಮುಂಗಾರು ಮಾರುತಗಳಿಗೆ ಸ್ವಾಭಾವಿಕ ತಡೆಗೋಡೆಗಳಾಗಿರುವ ಈ ಪಶ್ಚಿಮ ಘಟ್ಟವು ದಕ್ಷಿಣ ಭಾರತದ ಬಹುತೇಕ ನದಿಗಳ ಜಲಮೂಲವ ಆಗಿದ್ದು, ಸಸ್ಯ ಮತ್ತು ಪ್ರಾಣಿಗಳ ಅಗಾಧ ಜೀವವೈವಿಧ್ಯತೆಯನ್ನು ಹೊಂದಿದೆ. 5000ಕ್ಕೂ ಹೆಚ್ಚು ಪ್ರಭೇದದ ಸಸ್ಯ ಸಂಕುಲಗಳು, 139 ಸಸ್ತನಿಗಳು, 508 ಪಕ್ಷಿಗಳು ಮತ್ತು 179 ಉಭಯಚರ ಪ್ರಭೇದಗಳು ಹಾಗೂ 650 ಜಾತಿಯ ವೃಕ್ಷಗಳ ನೆಲೆಯಾಗಿದೆ. ಲಾಂಗೂರ್, ಸಿಂಹ ಬಾಲದ ಸಿಂಗಳಿಕ, ನೀಲಗಿರಿ ತಾಹರ್ ಮುಂತಾದ ಹಲವಾರು ಅಳಿವಿನಂಚಿನಲ್ಲಿರುವ ಪ್ರಾಣಿಪ್ರಭೇದಗಳಿಗೆ ಪಶ್ಚಿಮ ಘಟ್ಟಗಳು ನೆಲೆಯಾಗಿವೆ. ಪಶ್ಚಿಮ ಘಟ್ಟಗಳನ್ನು ಭಾರತದ ಮಹಾ ಇಳಿಜಾರು ಅಥವಾ ಎತ್ತರದ ಶಿಖರ ತಾಣ ಎಂದೂ ಸಹ ಕರೆಯಲಾಗುತ್ತದೆ.

ಪಶ್ಚಿಮ ಘಟ್ಟಗಳ ಪರಿಸರಕ್ಕೆ ದಕ್ಕೆ :

ಮಾನವನ ಅಭಿವೃದ್ಧಿ ಚಟುವಟಿಕೆಗಳು ಮತ್ತು ಜನಸಂಖ್ಯೆ ಹೆಚ್ಚಳವು ಪಶ್ಚಿಮ ಘಟ್ಟಗಳ ಸಂಪನ್ಮೂಲಗಳನ್ನು ಬರಿದು ಮಾಡುತ್ತಿವೆ. ಮರಗಳ ಹನನ, ನಗರೀಕರಣ, ಪ್ರವಾಸೋದ್ಯಮ, ಅತಿಕ್ರಮಣ, ಅಣೆಕಟ್ಟುಗಳ ನಿರ್ಮಾಣ, ಜಲ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳ ನಿರ್ಮಾಣ, ಗಣಿಗಾರಿಕೆ, ಜೀವ ವೈವಿಧ್ಯದ ನಷ್ಟ-ಸಂಕಷ್ಟಕ್ಕ್ಕೆ ಕಾರಣವಾಗುವಂತಹ ಮೂಲ ಸೌಕರ್ಯಗಳ ಅಭಿವೃದ್ಧಿ ಇತ್ಯಾದಿಗಳು ಪಶ್ಚಿಮ ಘಟ್ಟಗಳು ನಶಿಸುವಂತೆ ಮಾಡುತ್ತಿವೆ. ಈ ಎಲ್ಲ ಕಾರಣಗಳಿಂದ ಘಟ್ಟ ಪ್ರದೇಶಕ್ಕೆ ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಅಪಾಯಗಳು ಎದುರಾಗಿವೆ.

ಪಶ್ಚಿಮ ಘಟ್ಟಗಳಲ್ಲಿ ಪ್ರಸ್ತುತ, ಕೇವಲ ಶೇಕಡ 6.8ರಷ್ಟು ಮೂಲ ಅರಣ್ಯ ಮಾತ್ರವೇ ಅಸ್ತಿತ್ವದಲ್ಲಿವೆ. ಉಳಿದ ಕಾನನ ಪ್ರದೇಶ ನಶಿಸಿಹೋಗಿದೆ. ಕೇಂದ್ರ ಸರ್ಕಾವು ಪರಸರ ವಿಜ್ಞಾನಿ ಮಾಧವ್ ಗಾಡ್ಗೀಲ್ ಅವರ ನೇತೃತ್ವದಲ್ಲಿ ೨೦೧೧ರಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕಾರ್ಯಸೂಚಿಗಳನ್ನು ರಚಿಸಲು ಸಮಿತಿ ರಚನೆ ಮಾಡಿತ್ತು. ಇದನ್ನು ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ ಎಂದು ಕರೆಯಲಾಗಿತ್ತು.

ಸಮತಿಯು ನೀಡಿದ ವರದಿಯಲ್ಲಿ ಹಲವು ಶಿಫಾರಸುಗಳಿದ್ದವು. ಅವುಗಳೆಂದರೆ : ಪಶ್ಚಿಮ ಘಟ್ಟಗಳನ್ನು ಸಂಪೂರ್ಣವಾಗಿ ಪರಿಸರ ಸೂಕ್ಷ್ಮ ವಲಯಗಳೆಂದು ಗುರುತಿಸಬೇಕು (ಇದನ್ನು ಅತಿ ಹೆಚ್ಚು ಸುರಕ್ಷಿತ, ಹೆಚ್ಚು ಸುರಕ್ಷಿತ, ಮತ್ತು ಮಧ್ಯಮ ಸುರಕ್ಷಿತ ಎಂದು ಮೂರು ವರ್ಗಗಳಾಗಿ ವಿಂಗಡಿಸಬೇಕು. ಅಲ್ಲಿ ಸೀಮಿತ ಅಭಿವೃದ್ದಿಗೆ ಮಾತ್ರ ಅನುಮತಿ ನೀಡಬೇಕು) ; ಪರಿಸರ ಶ್ರೀಮಂತಿಕೆ ಮತ್ತು ಭೂಮಿಯ ಬಳಕೆಯ ಪ್ರಮಾಣವನ್ನು ಆಧರಿಸಿ ಕಲ್ಲು ಗಣಿಗಾರಿಕೆ ಸೇರಿದಂತೆ ಎಲ್ಲ ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರಗಳು, ಅಣೆಕಟ್ಟುಗಳ ನಿರ್ಮಾಣ, ಮರಳು ಗಣಿಗಾರಿಕೆ ಮತ್ತು 20,000 ಚ.ಮೀ ಗಿಂತ ಹೆಚ್ಚಿನ ಕಟ್ಟಡ ನಿರ್ಮಾಣವನ್ನು ನಿಷೇಧಿಸಬೇಕು ಎಂಬುದು ಪ್ರಮುಖ ಶಿಫಾರಸುಗಳಾಗಿವೆ.

ಈ ಮಾಧವ್ ಗಾಡ್ಗೀಲ್ ವರದಿಯ ವಿರುದ್ದವಾಗಿ ಕೈಗಾರಿಕಾ ಲಾಬಿಯು ಪ್ರತಿಭಟನೆ ನಡೆಸಿತು. ಪರಿಣಾಮವಾಗಿ, ವಿವಿಧ ರಾಜ್ಯಗಳು ಗಾಡ್ಗೀಲ್ ವರದಿಯನ್ನು ಜಾರಿಗೆ ತರುವುದನ್ನು ಮುಂದೂಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದವು. ನಂತರ ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ನೇತೃತ್ವದಲ್ಲಿ 2013ರಲ್ಲಿ ಮತ್ತೊಂದು ಸಮಿತಿಯನ್ನು ನೇಮಕ ಮಾಡಿ ಪಶ್ಚಿಮ ಘಟ್ಟಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಹೇಳಿತು.

ಕಸ್ತೂರಿ ರಂಗನ್ ಸಮಿತಿಯು ಗಾಡ್ಗೀಲ್ ವರದಿ ಹೇಳಿದ್ದ ಪಶ್ಚಿಮ ಘಟ್ಟಗಳ ಒಟ್ಟು ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸುವುದಕ್ಕೆ ಬದಲಾಗಿ, ಕೇವಲ ಶೇ.37ರಷ್ಟು ಪ್ರದೇಶವನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಕರೆಯುವಂತೆ ಹೇಳಿತು. ಈ ಶೇ.37ರಷ್ಟು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು. ವಿವರವಾದ ಅಧ್ಯಯನದ ನಂತರವೇ ಜಲ ವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಬೇಕೆಂದು ಸೂಚಿಸಿತು. ಪಶ್ಚಿಮ ಘಟ್ಟಗಳ ಕೇಂದ್ರ ಪ್ರಾಧಿಕಾರದ ಬದಲಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ರಾಜ್ಯ ಜೀವ ವೈವಿಧ್ಯ ಮಂಡಳಿಗಳಿಂದ ಕಾನೂನು ಚೌಕಟ್ಟನ್ನು ಬಲಪಡಿಸುವಂತೆ ಹೇಳಿತು.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು 2022 ಜುಲೈ ತಿಂಗಳಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದೆ. ಆದರೆ, ಕರ್ನಾಟಕದಲ್ಲಿನ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಕೇರಳ ಮತ್ತು ಗೋವಾ ರಾಜ್ಯಗಳೂ ಕೂಡ ಕಸ್ತೂರಿ ರಂಗನ್ ವರದಿಯನ್ನು ತೀವ್ರವಾಗಿ ವಿರೋಧಿಸಿದವು. ಪ್ರಸ್ತುತ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೂಡ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸದಿರಲು ನಿರ್ಣಯ ಕೈಗೊಂಡಿದೆ. ಉದ್ಯಮಿಗಳ ಮತ್ತು ಸರ್ಕಾರಗಳ ಸ್ವಾರ್ಥದಿಂದಾಗಿ ಪರಿಸರ ಸಂರಕ್ಷಣೆಯ ಈ ಎರಡೂ ವರದಿಗಳು ಹಳ್ಳ ಹಿಡಿದವು.

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಏನು ಮಾಡಬೇಕು?

ವಿಶ್ವವು ತೀವ್ರವಾದ ಹವಾಮಾನ ಬಿಕ್ಕಟ್ಟನ್ನು ಎದುರಿಸುತ್ತಿರಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷವಾಗಿ ಪರಿಸರ ವ್ಯವಸ್ಥೆಯನ್ನು ನಾಶಪಡಿಸುವ ಅಪಾಯಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯ ಸರ್ಕಾರಗಳು ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ಅವೈಜ್ಞಾನಿಕವಾಗಿ ನಡೆಸುವ ನಿರ್ಮಾಣ ಕೆಲಸಗಳನ್ನು ನಿಯಂತ್ರಿಸಲು ಸೂಕ್ತವಾದ ಕಾನೂನು ರೂಪಿಸಬೇಕು. ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಯುನೆಸ್ಕೋದ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಮುಖ್ಯವೋ ಅಥವಾ ಪರಿಸರ ಸಂರಕ್ಷಣೆಗೆ ಮುಖ್ಯವೋ ಎಂಬ ಸಂದಿಗ್ಧ ಪ್ರಶ್ನೆ ಉದ್ಭವಿಸಿದೆ. ನಾಗಾಲೋಟದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಭಿವೃದ್ಧಿ ಅಗತ್ಯಗಳಿಗೆ ಅನುಗುಣವಾಗಿ ಪರಿಸರ ಸಂರಕ್ಷಣೆ ಮತ್ತು ವಾಣಿಜ್ಯ ಅವಕಾಶಗಳ ಆರ್ಥಿಕ ಅಭಿವೃದ್ಧಿಯ ನಡುವಿನ ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳಬೇಕಿದೆ. ಸುಸ್ಥಿರ ಅಭಿವೃದ್ಧಿಯ ಗುರಿಗಳೊಂದಿಗೆ ಪಶ್ಚಿಮ ಘಟ್ಟಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ. ಇದು ಸರ್ಕಾರ, ಜನಪ್ರತಿನಿಧಿಗಳು, ಪರಿಸರವಾದಿಗಳು, ಪರಿಸರ ಸಂರಕ್ಷಣಾ ಸಂಸ್ಥೆಗಳು, ಜೀವವಿಜ್ಞಾನಿಗಳ ಆದ್ಯ ಕರ್ತವ್ಯವೂ ಆಗಿದೆ.

ಬಾಕ್ಸ್
ಜೀವವೈವಿಧ್ಯತೆಯ ರಮ್ಯ ತಾಣ

ಪಶ್ಚಿಮ ಘಟ್ಟಗಳು ಅಸಾಧಾರಣವಾದ ಉನ್ನತ ಮಟ್ಟದ ಜೈವಿಕ ವೈವಿಧ್ಯತೆಯ ವಿಶ್ವದ ಎಂಟು ‘ಅತ್ಯಂತ ಹಾಟ್‌ಸ್ಪಾಟ್’ಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಈ ಸ್ಥಳದ ಕಾಡುಗಳು ಸಮಭಾಜಕವಲ್ಲದ ಉಷ್ಣವಲಯದ ನಿತ್ಯಹರಿದ್ವರ್ಣ ಅರಣ್ಯಗಳನ್ನೂ ಒಳಗೊಂಡಿವೆ. ಜಾಗತಿಕವಾಗಿ ಕನಿಷ್ಠ 325 ಅಳಿವಿನಂಚಿನಲ್ಲಿರುವ ಸಸ್ಯ, ಪ್ರಾಣಿ, ಪಕ್ಷಿಗಳು, ಉಭಯಚರ ಜೀವಿಗಳು ಮತ್ತು ಮತ್ಸ್ಯ ಪ್ರಭೇದಗಳಿಗೆ ಈ ಭವ್ಯ ಪರಿಸರ ನೆಲೆಯಾಗಿದೆ.

ಪಶ್ಚಿಮ ಘಟ್ಟಗಳಲ್ಲಿನ ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳನ್ನು 229 ಸಸ್ಯ ಪ್ರಭೇದಗಳು, 31 ಸಸ್ತನಿಗಳು, 15 ಪಕ್ಷಿಗಳು, 43 ಉಭಯಚರಗಳು, 5 ಸರೀಸೃಪಗಳು ಮತ್ತು ಒಂದ ಮೀನು ಪ್ರಭೇದಗಳು ಪ್ರತಿನಿಧಿಸುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಒಟ್ಟು 325 ಪ್ರಭೇದಗಳಲ್ಲಿ, 129 ದುರ್ಬಲ ಪ್ರಭೇದಗಳು, 145 ಅಳಿವಿನಂಚಿನಲ್ಲಿರುವ ಪ್ರಭೇದಗಳು ಮತ್ತು 51 ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ವರ್ಗೀಕರಿಸಲಾಗಿದೆ.

ಪಶ್ಚಿಮ ಘಟ್ಟಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಜೈವಿಕ ವೈವಿಧ್ಯತೆಯ ಸಂರಕ್ಷಣೆಗಾಗಿ ಅಪಾರ ಜಾಗತಿಕ ಪ್ರಾಮುಖ್ಯತೆಯ ಪ್ರದೇಶವೆಂದು ಗುರುತಿಸಲ್ಪಟ್ಟಿವೆ. ಜೊತೆಗೆ ಹೆಚ್ಚಿನ ಭೌಗೋಳಿಕ, ಸಾಂಸ್ಕೃತಿಕ ಮತ್ತು ಸೌಂದರ್ಯದ ಮೌಲ್ಯಗಳನ್ನು ಹೊಂದಿವೆ. ಭಾರತದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಭವ್ಯವಾಗಿ ತಲೆಎತ್ತಿರುವ ಪರ್ವತಗಳ ಸ್ತೋಮಗಳು, ಸರಿಸುಮಾರು ಸುಮಾರು 50 ಕಿ.ಮೀ ಒಳನಾಡಿನ ಘಟ್ಟಗಳು, ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳನ್ನು ವ್ಯಾಪಿಸಿರುವ ಇದರ ರಮ್ಯತೆಗೆ ಸಾಕ್ಷಿ. ಈ ಪರ್ವತಗಳು 1,600 ಕಿ.ಮೀ. ಉದ್ದದ ಪ್ರದೇಶದಲ್ಲಿ ಸುಮಾರು 1,40,000 ಕಿ.ಮೀ. ವಿಸ್ತೀರ್ಣವನ್ನು ಒಳಗೊಂಡಿವೆ,

ಪರಿಸರ ಕಾರ್ಯಕರ್ತರ ಕಳವಳ

ಪಶ್ಚಿಮ ಘಟ್ಟವು ಪ್ರಪಂಚದ ಪ್ರಮುಖ ಜೀವವೈವಿಧ್ಯ ಹಾಟ್‌ಸ್ಪಾಟ್‌ಗಳಲ್ಲಿ ಒಂದು. ಇಲ್ಲಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳುವುದರಿಂದ ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಕುತ್ತು ಉಂಟಾಗುತ್ತದೆ. ಹೆದ್ದಾರಿ ನಿರ್ಮಾಣ, ನೀರಾವರಿ ಯೋಜನೆಗಳು, ವಿದ್ಯುತ್ ಮಾರ್ಗ, ತೈಲ ಸಾಗಿಸುವ ಕೊಳವೆ ಮಾರ್ಗಗಳ ಅಳವಡಿಕೆಗಾಗಿ ಜಲವಿದ್ಯುತ್ ಯೋಜನೆಗಳಿಗಾಗಿ ಪಶ್ಚಿಮ ಘಟ್ಟದ ಅನೇಕ ಕಡೆ ಅರಣ್ಯ ಈಗಾಗಲೇ ನಾಶವಾಗಿದೆ. ಇದರ ಪರಿಣಾಮವಾಗಿ ನಾಲ್ಕೆೈದು ವರ್ಷಗಳಲ್ಲಿ ಭಾರಿ ಪ್ರಮಾಣದ ಭೂ ಕುಸಿತಗಳು ಪಶ್ಚಿಮ ಘಟ್ಟದ ಉದ್ದಕ್ಕೂ ಪದೇ ಪದೇ ಸಂಭವಿಸಿವೆ. ಹಾಗಾಗಿ ಈ ಪಶ್ಚಿಮ ಘಟ್ಟದಲ್ಲಿ ಘಾಟಿಗಳಲ್ಲಿ ಹೆದ್ದಾರಿ ಅಭಿವೃದ್ಧಿಯ ನೆಪದಲ್ಲಿ ಪರಿಸರಕ್ಕೆ ಮತ್ತಷ್ಟು ಹಾನಿಯನ್ನುಂಟು ಮಾಡಬಾರದು ಎಂಬುದು ಪರಿಸರ ಕಾರ್ಯಕರ್ತರ ಕಳಕಳಿ. ಜೀವ ವಿಜ್ಞಾನಿಗಳೂ ಇದಕ್ಕೆ ದನಿಗೂಡಿಗೂಡಿಸುತ್ತಾರೆ.

ಜೀವವೈವಿಧ್ಯ ಹಾಗೂ ಪರಿಸರ ವ್ಯವಸ್ಥೆಯ ಸಂರಕ್ಷಣೆ ದೃಷ್ಟಿಯಿಂದ ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳದಿರುವುದು ಸೂಕ್ತ. ಪಶ್ಚಿಮಘಟ್ಟಗಳಂತಹ ಸೂಕ್ಷ್ಮ ಪ್ರದೇಶದಲ್ಲಿ ಸುರಂಗ ನಿರ್ಮಿಸಿ ಭಾರಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರೆ ಒಂದಿಲ್ಲ ಒಂದು ದಿನ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಜೀವವಿಜ್ಞಾನಿಗಳು ಗಂಭೀರ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈಗ ಎಲ್ಲದಕ್ಕೂ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ವಾಣಿಜ್ಯ ಅವಕಾಶಗಳಿಗೆ ಕಾರಣವಾಗುವ ಸುರಂಗ ಮಾರ್ಗ ನಿರ್ಮಾಣ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ನಿರ್ಮಿಸುವಾಗ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಪರಿಸರದ ಮೇಲಾಗುವ ದುಷ್ಪರಿಣಾಮವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು. ಸುರಂಗ ನಿರ್ಮಾಣಕ್ಕೆ ಸುಧಾರಿತ ತಂತ್ರಜ್ಞಾನ ಬಳಸಿದರೆ ಭವಿಷ್ಯದಲ್ಲೂ ಯಾವುದೇ ಅಪಾಯ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ತಂತ್ರಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *

Back To Top