ಆಗಸದಲ್ಲಿ ಶಕ್ತಿಶಾಲಿ ರೇಡಾರ್ ಕಣ್ಣು-ನಿಸಾರ್

ಆಗಸದಲ್ಲಿ ಶಕ್ತಿಶಾಲಿ ರೇಡಾರ್ ಕಣ್ಣು-ನಿಸಾರ್

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್-ರಾಷ್ಟ್ರೀಯ ವೈಮಾಂತರಿಕ್ಷ ಮತ್ತು ಬಾಹ್ಯಾಕಾಶ ಆಡಳಿತ ಸಂಸ್ಥೆ) ಮತ್ತು ಭಾರತದ ಇಸ್ರೋ (ಇಂಡಿಯನ್ ಸ್ಪೇನ್‌ರಿಸರ್ಚ್ ಆರ್ಗನೈಷೇಷನ್-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಜಂಟಿಯಾಗಿ ಅಭಿವೃದ್ಧಿಪಡಿಸಿದ ವಿಶೇಷ ಭೂ-ಮೇಲ್ವಿಚಾರಣಾ ರೇಡಾರ್ ಉಪಗ್ರಹವೇ ನಿಸಾರ್.
ಇದು ಬಾಹ್ಯಾಕಾಶದಿಂದ ರೇಡಾರ್ ತರಂಗಗಳನ್ನು ಕಳುಹಿಸುವ ಮತ್ತು ನೆಲದಿಂದ ಹಿಂತಿರುಗುವ ಪ್ರತಿಧ್ವನಿಗಳನ್ನು ಹಿಡಿಯುವ ತಂತ್ರಜ್ಞಾನವಾಗಿದೆ. ಸಾಮಾನ್ಯ ಕ್ಯಾಮೆರಾಗಳಿಗಿಂತ ಭಿನ್ನವಾಗಿ, ರಾತ್ರಿಯಲ್ಲೂ ಅಥವಾ ಮೋಡಗಳು, ಮಳೆ, ಹೊಗೆ ಮತ್ತು ಕಾಡುಗಳ ಮೂಲಕವೂ ಅತ್ಯಂತ ಸಮರ್ಥವಾಗಿ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತದೆ. ನಿಸಾರ್‌ನ ಮತ್ತೊಂದು ವಿಶೇಷತೆ ಏನೆಂದರೆ, ಇದು ಎರಡು ರೀತಿಯ ರೇಡಾರ್ ಬ್ಯಾಂಡ್‌ಗಳನ್ನು ಒಟ್ಟಿಗೆ ಬಳಸಿದ ಮೊದಲ ಉಪಗ್ರಹವಾಗಿದೆ.
ಮುಂದುವರೆದು ಭೂಕಂಪಗಳು, ಭೂಕುಸಿತಗಳು, ಪ್ರವಾಹಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು, ಹವಾಮಾನ ಬದಲಾವಣೆಯಿಂದಾಗಿ ಕರಗುತ್ತಿರುವ ಹಿಮನದಿಗಳು ಮತ್ತು ಮಂಜುಗಡ್ಡೆಯ ಪದರಗಳು, ಬೆಳೆಯುತ್ತಿರುವ ಅಥವಾ ಕುಗ್ಗುತ್ತಿರುವ ಅರಣ್ಯಗಳು ಮತ್ತು ಜೌಗು ಪ್ರದೇಶಗಳು ಪತ್ತೆ ಮಾಡಿ, ಈ ಮಾಹಿತಿಯು ವಿಪತ್ತುಗಳ ಸಮಯದಲ್ಲಿ ತುರ್ತು ರಕ್ಷಣಾ ಕಾರ್ಯಕರ್ತರಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಲು ರವಾನಿಸಿ ಸಹಾಯ ಮಾಡುತ್ತದೆ ಹಾಗೂ ಭೂಮಿಯ ಪರಿಸರದಲ್ಲಿನ ದೀರ್ಘಾವಧಿಯ ಬದಲಾವಣೆಗಳನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ನೆರವಾಗುತ್ತದೆ.
ಇದೆ ಜುಲೈ 30 ರಂದು ಉಡಾವಣೆಗೊಂಡು ಭೂ ಕಕ್ಷೆ ತಲುಪುವ ಈ ನಿಸಾರ್ ಅನ್ನು ಭೂಮಿಯಿಂದ ಸುಮಾರು 747 ಕಿಲೋಮೀಟರ್ ಎತ್ತರದಲ್ಲಿ ಸೂರ್ಯ-ಸಿಂಕ್ರೊನಸ್ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಬಾಹ್ಯಾಕಾಶವನ್ನು ತಲುಪಿದ ನಂತರ, ಆಂಟೆನಾ ಒಂದು ನಿಯೋಜಿಸಬಹುದಾದ ಬೂಮ್ ಅನ್ನು ಬಳಸಿ ಛತ್ರಿಯಂತೆ ತೆರೆದುಕೊಳ್ಳುತ್ತದೆ. ಈ ವಿಶೇಷ ಕಾರ್ಯವಿಧಾನವು ಬಾಹ್ಯಾಕಾಶದಲ್ಲಿ ಆಂಟೆನಾವನ್ನು ಎಚ್ಚರಿಕೆಯಿಂದ ತೆರೆಯುತ್ತದೆ ಮತ್ತು ವಿಸ್ತರಿಸುತ್ತದೆ, ಇದು ಭೂಮಿಯ ವಿಶಾಲ ಪ್ರದೇಶಗಳಲ್ಲಿ ರೇಡಾರ್ ಸಂಕೇತಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಇದು ಭೂ ಚಲನೆ ಅಥವಾ ಹಿಮನದಿ ಕರಗುವಿಕೆಯಂತಹ ನಿಧಾನ ಬದಲಾವಣೆಗಳನ್ನು ಪತ್ತೆಹಚ್ಚಲು ಸೂಕ್ತವಾದ ರ‍್ಯಾಡರ್ ಹೊಂದಿರುತ್ತದೆ. ನಿಸಾರ್ ಪ್ರತಿ 98.5 ನಿಮಿಷಗಳಿಗೊಮ್ಮೆ ಭೂಮಿಯನ್ನು ಸುತ್ತುತ್ತದೆ ಮತ್ತು ಪ್ರತಿ 12 ದಿನಗಳಿಗೊಮ್ಮೆ ಪ್ರತಿ ಪ್ರದೇಶವನ್ನು ಎರಡು ಬಾರಿ ಸ್ಕ್ಯಾನ್ ಮಾಡುತ್ತದೆ – ಒಮ್ಮೆ ದಕ್ಷಿಣದಿಂದ ಉತ್ತರಕ್ಕೆ ಹೋಗುವಾಗ (ಏರುವ ಮಾರ್ಗ) ಮತ್ತು ಒಮ್ಮೆ ಉತ್ತರದಿಂದ ದಕ್ಷಿಣಕ್ಕೆ ಹೋಗುವಾಗ (ಇಳಿಯುವ ಮಾರ್ಗ) ಮಾರ್ಗವನ್ನು ಅನುಸರಿಸುತ್ತದೆ. ಇದರರ್ಥ ಪ್ರತಿ ೬ ದಿನಗಳಿಗೊಮ್ಮೆ ಪ್ರತಿ ಸ್ಥಳವನ್ನು ನಿಖರವಾಗಿ ಪರಿಶೀಲಿಸಲಾಗುತ್ತದೆ.
ನಿಸಾರ್‌ನ ಡೇಟಾ (ದತ್ತಾಂಶ ಮಾಹಿತಿ) ಅನೇಕ ಕ್ಷೇತ್ರಗಳಿಗೆ ಪ್ರಯೋಜನವನ್ನು ನೀಡುತ್ತದೆ: ವಿಜ್ಞಾನಿಗಳು ಇದರಿಂದ ಹವಾಮಾನ, ವಿಪತ್ತುಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಅಧ್ಯಯನ ಮಾಡುತ್ತಾರೆ. ರೈತರು ಮಣ್ಣಿನ ತೇವಾಂಶ ಮತ್ತು ಬೆಳೆ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಬಹುದು, ಜಲ ನಿರ್ವಾಹಕರು ನದಿಗಳು, ಸರೋವರಗಳು ಮತ್ತು ಬರಗಾಲಗಳನ್ನು ಪತ್ತೆಹಚ್ಚಬಹುದು. ನಗರ ಯೋಜಕರು ಭೂಕುಸಿತ ಅಥವಾ ಶಿಫ್ಟಿಂಗ್ ಅನ್ನು ಗಮನಿಸಬಹುದು ಎಲ್ಲಕ್ಕಿಂತ ಹೆಚ್ಚಾಗಿ, ಈ ಡೇಟಾವನ್ನು ನಾಸಾ ಆನ್‌ಲೈನ್‌ನಲ್ಲಿ ಉಚಿತವಾಗಿ ಹಂಚಿಕೊಳ್ಳುತ್ತದೆ, ಆದ್ದರಿಂದ ವಿಜ್ಞಾನಿಗಳಿಂದ ವಿದ್ಯಾರ್ಥಿಗಳವರೆಗೆ ಹಾಗೂ ನೀತಿ ನಿರೂಪಕರವರೆಗೆ ಯಾರು ಬೇಕಾದರೂ ಈ ಬಾಹ್ಯಾಕಾಶ ಮಾಹಿತಿಯನ್ನು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಳಸಬಹುದು.
ನಿಸಾರ್ ಉಪಗ್ರಹವನ್ನು ಜುಲೈ 30ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ಇದನ್ನು ಇಸ್ರೋ-ನಿರ್ಮಿತ ಜಿಎಸ್‌ಎಲ್‌ವಿ ಮಾರ್ಕ್ II ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಉಪಗ್ರಹವು ಸುಮಾರು 3 ಟನ್‌ಗಳಷ್ಟು ತೂಕವನ್ನು ಹೊಂದಿದೆ ಮತ್ತು ಬಾಹ್ಯಾಕಾಶದಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತದೆ.
ನಿಸಾರ್ ರೇಡಾರ್ ಉಪಗ್ರಹ ಕಲ್ಪನೆಯು 2007ರಲ್ಲಿ ಪ್ರಾರಂಭವಾಯಿತು, ನಾಸಾ ಐ-ಬ್ಯಾಂಡ್ ಬಳಸುವ ಹೊಸ ರೇಡಾರ್ ಉಪಗ್ರಹವನ್ನು ಪ್ರಸ್ತಾಪಿಸಿದಾಗ ಈ ಯೋಜನೆ ಸ್ಪಷ್ಟರೂಪ ಪಡೆಯಿತು. ಅದೇ ಸಮಯದಲ್ಲಿ, ಇಸ್ರೋಎಸ್-ಬ್ಯಾಂಡ್ ಬಳಸುವ ಒಂದನ್ನು ವಿನ್ಯಾಸಗೊಳಿಸುತ್ತಿತ್ತು. 2014ರಲ್ಲಿ, ಎರಡೂ ರೇಡಾರ್‌ಗಳನ್ನು ಹೊತ್ತು ಒಂದು ಶಕ್ತಿಶಾಲಿ ಉಪಗ್ರಹವನ್ನು ಮಾಡಲು ಉಭಯ ದೇಶಗಳ ವಿಜ್ಞಾನಿಗಳು ಕೈಜೋಡಿಸಿದರು. ಅಂದಿನಿಂದ, ನಿಸಾರ್ ಉಪಗ್ರಹವನ್ನು ಕಾರ್ಯರೂಪಕ್ಕೆ ತರಲು ನಾಸಾ ಮತ್ತು ಇಸ್ರೋ ನಿಕಟವಾಗಿ ಕೆಲಸ ಮಾಡಿವೆ. ನಿಸಾರ್ ನಿರ್ಮಾಣಕ್ಕೆ ಸುಮಾರು 1.5 ಶತಕೋಟಿ ಡಾಲರ್ (12,500 ಕೋಟಿ ರೂ.ಗಳ) ವೆಚ್ಚವಾಗಿರುತ್ತದೆ.
ನೈಸರ್ಗಿಕ ವಿಕೋಪಗಳು, ಹವಾಮಾನ ಬದಲಾವಣೆ ಮತ್ತು ಹಿಮನದಿಗಳು, ಭೂಕಂಪಗಳು, ಜ್ವಾಲಾಮುಖಿಗಳು, ಪ್ರವಾಹಗಳು, ಕ್ಷಾಮಗಳು, ನಗರ ಪ್ರದೇಶಗಳ ಭೂಮಿಯ ಅಳದಲ್ಲಿ ಅಡಗಿರುವ ಮತ್ತು ಯಾವುದೇ ಕ್ಷಣದಲ್ಲಿ ಘೋರ ವಿಪತ್ತಿಗೆ ಕಾರಣವಾಗುವ ಮಾನವ ನಿರ್ಮಿತ ದುರಂತಗಳು ಇತ್ಯಾದಿಗಳ ಬಗ್ಗೆ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ ನೀಡುವುದಲ್ಲದೆ, ಪರಿಸರ ವ್ಯವಸ್ಥೆಗಳು, ಬೆಳೆಗಳು ಮತ್ತು ಜಲಸಂಪನ್ಮೂಲಗಳನ್ನು ಅಧ್ಯಯನ ಮಾಡಲು ಕೂಡ ಸಹಾಯ ಮಾಡುತ್ತದೆ. ಒಟ್ಟಾರೆ ಇದು ಅಂತರಿಕ್ಷದಿಂದ ಭೂಮಿಯ ಮೇಲೆ ಸುರಕ್ಷಿತ ಕಣ್ಗಾವಲು.
ಈ ವಿಷಯದ ಬಗ್ಗೆ ನಾಸಾ ಬಿಡುಗಡೆ ಮಾಡಿದ ವಿಶೇಷ ವಿಡಿಯೋ ನೋಡಿ ಆನಂದಿಸಿಡಿದು ಯೂಟ್ಯೂಬ್‌ನಲ್ಲಿ ಲಭ್ಯವಿರುತ್ತದೆ.

Leave a Reply

Your email address will not be published. Required fields are marked *

Back To Top